ಸಾರಾಂಶ
ಲೋಕಾಯುಕ್ತ ಅಧಿಕಾರಿಗಳು ಅಪಾರ ಹಣ ಹಾಗೂ ಆಸ್ತಿ ಹೊಂದಿರುವ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅಂತಹ ಭ್ರಷ್ಟ ಅಧಿಕಾರಿಗಳನ್ನು ಪಾರದರ್ಶಕ ತನಿಖೆಗೆ ಒಳಪಡಿಸಬೇಕು ಎಂದು ಭೀಮ್ ಸೇವಾ ಸಮಿತಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಒತ್ತಾಯಿಸಿದ್ದಾರೆ. ವಿಧಾನಸೌಧಕ್ಕೆ ತೆರಳಿ ಸರ್ಕಾರದ ಮುಖ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ ಬಳಿಕ ಹೊಸಕೋಟೆಯಲ್ಲಿ ಮಾತನಾಡಿದರು.
ಸಿಎಸ್‌ಗೆ ಮನವಿ
ಕನ್ನಡಪ್ರಭ ವಾರ್ತೆ ಹೊಸಕೋಟೆರಾಜ್ಯದ ಹಲವಾರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಪಾರ ಹಣ ಹಾಗೂ ಆಸ್ತಿ ಹೊಂದಿರುವ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅಂತಹ ಭ್ರಷ್ಟ ಅಧಿಕಾರಿಗಳನ್ನು ಪಾರದರ್ಶಕ ತನಿಖೆಗೆ ಒಳಪಡಿಸಬೇಕು ಎಂದು ಭೀಮ್ ಸೇವಾ ಸಮಿತಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಈಗಾಗಲೇ ವಿಧಾನಸೌಧಕ್ಕೆ ತೆರಳಿ ಸರ್ಕಾರದ ಮುಖ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ಅಧಿಕಾರಿ ಸುನಿಲ್ ಕುಮಾರ್ ಸೇರಿದಂತೆ ರಾಜ್ಯದ 10 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಅಕ್ರಮ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟ ಅಧಿಕಾರಿಗಳಿಂದ ಸರ್ಕಾರಿ ಕಚೇರಿಗಳು ಪಾಪದ ಕೂಪಗಳಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತಿದೆ. ಜನಸಾಮಾನ್ಯರ ಮೇಲು ದುಷ್ಪರಿಣಾಮ ಬೀರುತ್ತಿದೆ. ಲಂಚ ಮುಕ್ತ ದೇಶ ಎನ್ನುವುದು ಕೇವಲ ಕನಸಿನ ಮಾತಾಗಿದೆ. ಆದ್ದರಿಂದ ಲೋಕಾಯುಕ್ತ ದಾಳಿಗೆ ಒಳಗಾಗಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಪಾರದರ್ಶಕ ತನಿಖೆ ಆಗಬೇಕು ಎಂದರು.ತನಿಖೆವರೆಗೂ ಅಮಾನತಿನಲ್ಲಿಡಿ:
ಲೋಕಾಯುಕ್ತ ದಾಳಿಗೆ ಒಳಗಾಗಿರುವ ಅಧಿಕಾರಿಗಳನ್ನು ತನಿಖೆ ಮುಗಿಯುವವರಿಗೂ ಅಮಾನತಿನಲ್ಲಿ ಇಡಬೇಕು. ಅಕ್ರಮ ಆಸ್ತಿ ಗಳಿಕೆ ಭ್ರಷ್ಟಾಚಾರದ ಆರೋಪ ಸಾಬೀತಾದಲ್ಲಿ ನಿವೃತ್ತಿಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಚಾಲಕರ ಘಟಕದ ಜಿಲ್ಲಾಧ್ಯಕ್ಷ ಬಿ.ಆರ್.ಮುನಿರಾಜು, ಆಟೋ ಘಟಕದ ಜಿಲ್ಲಾಧ್ಯಕ್ಷ ಸಿ. ಶ್ರೀನಾಥ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವರುಣ್ ರಾಜ್ ಚಕ್ರವರ್ತಿ, ಮಹಿಳಾ ಘಟಕದ ಕಾರ್ಯದರ್ಶಿ ಶೋಭಾ, ಸಮಿತಿ ಸದಸ್ಯರಾದ ಕವಿತಾ, ನಿತಿನ್ ಉಪಸ್ಥಿತರಿದ್ದರು.