ಬೀಸುವಕಲ್ಲು ಎತ್ತಿಹಾಕಿ ಪತ್ನಿ ಕೊಲೆ ಮಾಡಿದ ಕಂಡಕ್ಟರ್!

| Published : Oct 09 2025, 02:01 AM IST

ಸಾರಾಂಶ

ಯಲ್ಲಮ್ಮ ಅಲಿಯಾಸ್ ಸ್ವಾತಿ‌ (35) ಹತ್ಯೆಯಾದ ಮಹಿಳೆ. ಪತಿ ರಮೇಶ್ ನರಗುಂದ ಎಂಬಾತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗದಗ: ಬೀಸುವ ಕಲ್ಲನ್ನು ಎತ್ತಿಹಾಕಿ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಯಲ್ಲಮ್ಮ ಅಲಿಯಾಸ್ ಸ್ವಾತಿ‌ (35) ಹತ್ಯೆಯಾದ ಮಹಿಳೆ. ಪತಿ ರಮೇಶ್ ನರಗುಂದ ಎಂಬಾತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ಮನೆಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೊದಲು ಮನೆಯಲ್ಲಿದ್ದ ಬೀಸುವ ಕಲ್ಲಿನಿಂದ ಹೆಂಡತಿ ತಲೆ‌ಮೇಲೆ ಎತ್ತಿ ಹಾಕಿ,‌ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರಮೇಶ ಹಾಗೂ ಸ್ವಾತಿಗೆ ಮೂವರು ಮಕ್ಕಳಿದ್ದು, ಪತಿ ರಮೇಶ ನರಗುಂದ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ಇದೀಗ ತಾಯಿ ಕಳೆದುಕೊಂಡು ಮಕ್ಕಳು ಅನಾಥವಾಗಿವೆ.

ಸ್ಥಳಕ್ಕೆ ಗದಗ ಎಸ್ಪಿ ರೋಹನ್ ಜಗದೀಶ್ ಹಾಗೂ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಲೋಕಾ ದಾಳಿ, ಬಲೆಗೆ ಬಿದ್ದ ಸಹಾಯಕ ಎಂಜಿನಿಯರ್

ಗದಗ: ರೋಣ ಲೋಕೋಪಯೋಗಿ ಉಪವಿಭಾಗದ ಸಹಾಯಕ ಎಂಜಿನಿಯರ್ ಮಹೇಶ ರಾಠೋಡ, ಗುತ್ತಿಗೆದಾರರೊಬ್ಬರಿಂದ 3 ಲಕ್ಷ ಮುಂಗಡ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ ಸಂಜೆ ಜಿಲ್ಲೆಯ ಗಜೇಂದ್ರಗಡದಲ್ಲಿ ಜರುಗಿದೆ.ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಂಗಡಗಿ ನಿವಾಸಿ ಹಾಗೂ ದ್ವಿತೀಯದರ್ಜೆ ಗುತ್ತಿಗೆದಾರ ಶರಣಪ್ಪ ತಂದೆ ಸಾಬಣ್ಣ ಅವರು ಲೋಕಾಯುಕ್ತ ಪೊಲೀಸರಿಗೆ ನೀಡಿದ ದೂರಿನನ್ವಯ ದಾಳಿ ನಡೆದಿದೆ.ದೂರುದಾರರು ರೋಣ ತಾಲೂಕಿನಲ್ಲಿ ₹34 ಲಕ್ಷ ವೆಚ್ಚದ ಕಾಮಗಾರಿಯ ಗುತ್ತಿಗೆ ಪಡೆದು ಕೆಲಸ ಮುಗಿಸಿದ್ದರು. ಕಾಮಗಾರಿ ಮುಗಿದು ಆರು ತಿಂಗಳು ಕಳೆದಿದ್ದರೂ ಬಿಲ್ ಪಾವತಿ ಮಾಡಿಸಲು ಸಹಾಯಕ ಎಂಜಿನಿಯರ್ ಮಹೇಶ ರಾಠೋಡ ಅವರು ₹4,60,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ದಾಖಲಾದ ತಕ್ಷಣ ಕಾರ್ಯಾಚರಣೆ ರೂಪಿಸಿದರು. ಗಜೇಂದ್ರಗಡದ ಬಂಡಿ ಪೆಟ್ರೋಲ್ ಬಂಕ್ ಸಮೀಪದ ಬಯಲು ಜಾಗದಲ್ಲಿ ಗುತ್ತಿಗೆದಾರರಿಂದ ಮುಂಗಡವಾಗಿ 3 ಲಕ್ಷ ಲಂಚದ ಹಣವನ್ನು ಮಹೇಶ ರಾಠೋಡ ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.ಕಾರ್ಯಾಚರಣೆಯನ್ನು ಲೋಕಾಯುಕ್ತ ಧಾರವಾಡದ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಗದಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ವಿಜಯ ಬಿರಾದಾರ ತಂಡದ ನೇತೃತ್ವ ವಹಿಸಿದ್ದರು. ತನಿಖಾಧಿಕಾರಿಗಳಾದ ಎಸ್.ಎಸ್. ತೇಲಿ ಮತ್ತು ಪರಮೇಶ್ವರ ಕವಟಗಿ ಹಾಗೂ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.