ಸಾರಾಂಶ
ಹೊಸಪೇಟೆ: ರಾಜ್ಯದ ಮಹಾ ಜನತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ 2023ರಲ್ಲಿ ಭಾರೀ ಬಹುಮತ ನೀಡಿ ದೊಡ್ಡ ಸಂದೇಶ ನೀಡಿದ್ದಾರೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಹಾಗಾಗಿ ಈ ಭಾಗದಲ್ಲಿ ಸರ್ಕಾರದ ಎರಡು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಮೇ 20ರಂದು ಸಮರ್ಪಣೆ ಸಂಕಲ್ಪ ಸಮಾವೇಶ ನಡೆಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಮರ್ಪಣೆ ಸಂಕಲ್ಪ ಸಮಾವೇಶದ ಭವ್ಯ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಅನುಷ್ಠಾನ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಸಮಾವೇಶ ಮಾಡಿದ್ದೇವೆ. ಜನರಲ್ಲಿ ಹೊಸ ಶಕ್ತಿ ತುಂಬಲು ಸಮಾವೇಶ ಮಾಡುತ್ತಿದ್ದೇವೆ. ಕಂದಾಯ ಇಲಾಖೆಯಿಂದ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ ಎಂದರು.ರಾಜ್ಯ ಸರ್ಕಾರ ಅಭಿವೃದ್ಧಿ ಪರವಾಗಿದ್ದು, ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡಿದ್ದೇವೆ. ಪಂಚ ಗ್ಯಾರಂಟಿಗಳ ಜತೆಗೆ ಹೊಸ ಯೋಜನೆಗಳನ್ನು ಕೂಡ ಜಾರಿ ಮಾಡುತ್ತಿದ್ದೇವೆ ಎಂದರು.
ಗೇಟ್‌ಗಳ ಬದಲಾವಣೆ: ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸಲಾಗುವುದು. ಈಗಾಗಲೇ ತಾಂತ್ರಿಕ ಸಮಿತಿ ಪರಿಶೀಲನೆ ನಡೆಸಿ ವರದಿ ಕೂಡ ಸಲ್ಲಿಸಿದೆ. ತುಂಗಭದ್ರಾ ಮಂಡಳಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮೂರು ರಾಜ್ಯಗಳು ಸೇರಿ ಗೇಟ್‌ಗಳ ಬದಲಾವಣೆಗೆ ಅನುದಾನ ಒದಗಿಸುತ್ತೇವೆ ಎಂದರು.ತುಂಗಭದ್ರಾ ಜಲಾಶಯದಲ್ಲಿ ನೀರು ನಿಲ್ಲಿಸಲು ಕಷ್ಟವಾಗಿದೆ. ಹಾಗಾಗಿ ನೀರು ಉಳಿಸಿಕೊಳ್ಳೋಕೆ, ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಬಸವಸಾಗರ ಜಲಾಶಯಕ್ಕೆ ನೀರು ಶಿಫ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ನಾವು ರೈತರಿಗಾಗಿ ನೀರು ಉಳಿಸುವ ಕೆಲಸ ಮಾಡುತ್ತೇವೆ ಎಂದರು.
ಕಳಸಾ ಬಂಡೂರಿ ನಾಲಾ ಯೋಜನೆಗೆ ಪೂರಕವಾಗಿ ಕೇಂದ್ರ ವರದಿ ನೀಡಿದೆ. ಇದರಿಂದ ಗೋವಾ ರಾಜ್ಯಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಈ ಹಿಂದೆಯೇ ಕೇಂದ್ರದ ನಾಲ್ವರು ಸಚಿವರ ಬಳಿ ಚರ್ಚಿಸಿರುವೆ. ಕಳಸಾ ಬಂಡೂರಿ ಕುರಿತು ಪ್ರತ್ಯೇಕ ಸಭೆ ಮಾಡುತ್ತೇವೆ ಎಂದಿದ್ದಾರೆ ಎಂದರು.ಆಪರೇಷನ್ ಸಿಂದೂರ ಕುರಿತು ಶಾಸಕ ಕೊತ್ತನೂರು ಮಂಜುನಾಥ ನೀಡಿರುವ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಮಂಜುನಾಥರನ್ನು ಪ್ರಶ್ನಿಸುವೆ. ಆಪರೇಷನ್ ಸಿಂದೂರ ಕುರಿತು ನಾನು ಹೆಚ್ಚಿಗೆ ಮಾತನಾಡಲಾರೆ ಎಂದರು.
ವಿಜಯನಗರದಲ್ಲಿ ವಿಜಯ ಇದೆ ಎಂಬ ಕಾರಣಕ್ಕೆ ಇಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಕಾಂಗ್ರೆಸ್‌ನಲ್ಲಿ ಒಂದೇ ಬಣ, ಅದು ಕಾಂಗ್ರೆಸ್ ಬಣ. ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ. ವಿಜಯನಗರದಲ್ಲಿ ಬಣ ರಾಜಕೀಯ ಇದ್ದರೆ ಪರಿಶೀಲಿಸುವೆ ಎಂದರು.ಹೊಸಪೇಟೆ ಭಾಗದಲ್ಲಿ ಸರ್ಕಾರದಿಂದ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಾಧ್ಯವಿಲ್ಲ. ಖಾಸಗಿಯವರು ಮುಂದೆ ಬಂದರೆ ಸ್ಥಾಪನೆ ಮಾಡಲು ಸಹಕರಿಸುತ್ತೇವೆ. ಈ ಹಿಂದಿನ ಸರ್ಕಾರದಲ್ಲಿ ಈ ಸಂಬಂಧ ಏನಾಗಿದೆ ಎಂದು ಪರಿಶೀಲಿಸುತ್ತೇವೆ ಎಂದರು.
ಸಚಿವರಾದ ಚಲುವರಾಯಸ್ವಾಮಿ, ಕೆ. ಸುಧಾಕರ, ಶಾಸಕರಾದ ಹಂಪನಗೌಡ ಬಾದರ್ಲಿ, ಬಿ. ನಾಗೇಂದ್ರ, ಸಲೀಂ ಅಹಮದ್, ಮುಖಂಡರಾದ ಚಂದ್ರಶೇಖರ್, ಸಿರಾಜ್ ಶೇಕ್, ಆಂಜನೇಯಲು, ಶಿವಯೋಗಿ ಮತ್ತಿತರರಿದ್ದರು.