ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಸಮಾವೇಶವನ್ನು ಅಕ್ಟೋಬರ್ ತಿಂಗಳಿನಲ್ಲಿ ಮಂಡ್ಯ ನಗರದಲ್ಲಿ ಆಯೋಜಿಸಲು ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.ಭಾರತೀ ಎಜುಕೇಷನ್ ಟ್ರಸ್ಟ್‌ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೀರಾವರಿ ಸೌಲಭ್ಯದಡಿ ಎಲ್ಲರಿಗೂ ಸಮಾನ ನೀರು ಹಂಚಿಕೆ, ನೀರು ಪೋಲು ತಪ್ಪಿಸುವುದು, ವಿತರಣಾ ಮತ್ತು ಹೊಲಗಾಲುವೆಗಳ ದುರಸ್ತಿ, ನೀರಿನ ಕರ ವಸೂಲಾತಿ, ಮುಖ್ಯವಾಗಿ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವುದು ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.
ಅಲ್ಲದೇ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿ ನೀರು ಬಳಕೆದಾರರ ಸಹಕಾರ ಸಂಘಗಳು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.ರೈತರ ಪಾಲ್ಗೊಳ್ಳುವಿಕೆ ಹೆಚ್ಚಬೇಕು:
ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ನೀರು ಬಳಕೆದಾರರ ಸಹಕಾರ ಸಂಘಗಳು ಸಕ್ರಿಯವಾಗಿಲ್ಲ. ಇಂತಹ ಸಂಘಗಳನ್ನು ಗುರುತಿಸಿ ಪುನಶ್ಚೇತನಗೊಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ರೈತರ ಸಭೆ ನಡೆಸಿ ನೀರು ಬಳಕೆದಾರರ ಸಹಕಾರ ಸಂಘದ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಿ ಸಹಕಾರ ಕೋರಲಾಗುವುದು ಎಂದರು.ಕೆಆರ್‌ಎಸ್ ಅಣೆಕಟ್ಟೆ ತುಂಬಿದ್ದರೂ ಕಡೇ ಭಾಗಕ್ಕೆ ಸುಗಮವಾಗಿ ನೀರು ತಲುಪದೆ ರೈತರು ಸಂಕಷ್ಟ ಎದುರಿಸುವಂತಾಯಿತು. ನೀರಿನ ಸಂರಕ್ಷಣೆ ಮತ್ತು ನೀರು ನಿರ್ವಹಣೆ ಸಮರ್ಪಕವಾಗಿ ಆಗಿದ್ದರೆ ಇಂದಿನ ಜಲ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿತ್ತು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ರೈತರು ನಮ್ಮೊಂದಿಗೆ ಕೈಜೋಡಿಸಲು ಸಹಕಾರ ಸಂಘಗಳು ನಿಯಮಿತವಾಗಿ ಆಡಳಿತ ಮಂಡಳಿ ಸಭೆ ನಡೆಸಬೇಕು. ನೀರಿನ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ರೈತರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿಕೊಳ್ಳಬೇಕು, ಸಂಘದ ಚಟುವಟಿಕೆಗಳು ಚಲನಾಶೀಲವಾಗಿದ್ದಲ್ಲಿ ಮಾತ್ರ ನೀರು ಬಳಕೆದಾರರ ಸಹಕಾರ ಸಂಘಗಳ ಸ್ಥಾಪನೆ ಉದ್ದೇಶ ಈಡೇರಲಿದೆ. ಇಲ್ಲದಿದ್ದರೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದರು.ಕಾರ್ಯಾನುದಾನ ಹೆಚ್ಚಳಕ್ಕೆ ಆಗ್ರಹ:
ಸರ್ಕಾರ ಪ್ರತಿ ವರ್ಷ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ವಾರ್ಷಿಕ 1 ಲಕ್ಷ ರು. ಕಾರ್ಯಾನುದಾನ ಮತ್ತು ಏಕಕಾಲಿಕ ನಿರ್ವಹಣಾ ಅನುದಾನ ನೀಡುತ್ತಿದೆ. ಆದರೆ, ಈ ಅನುದಾನ ಏನೇನಕ್ಕೂ ಸಾಲದು. ಇದು ಹೆಚ್ಚಳವಾಗಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಕೆ.ಆರ್.ಎಸ್.ಫೆಡರೇಶನ್ ಅಧ್ಯಕ್ಷ ಕೆ.ಎಲ್.ದೊಡ್ಡಲಿಂಗೇಗೌಡ, ಬಿ.ಎನ್.ನಂಜೇಗೌಡ, ನಿರ್ದೇಶಕರಾದ ಎಚ್.ಕೃಷ್ಣ, ಬಿ.ಎಂ.ರಘು, ವಿ.ಕೆ.ಚನ್ನಬಸವೇಗೌಡ, ಎಚ್.ಡಿ.ಮಹದೇವು, ಸಿಇಓ ಬಿ.ಸುರೇಶ್ ಹಾಗೂ ನೀರು ಬಳಕೆದಾರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.