ಸಾರಾಂಶ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ವಿಭಾಗ, ಪಾವಟೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸಾಯಿನ್ಸಸ್ ಜಂಟಿಯಾಗಿ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಗಣಿತದ ವಿಶ್ಲೇಷಣೆ ಮತ್ತು ಅನ್ವಯಗಳ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ಸಮ್ಮೇಳನ ಉದ್ಘಾಟಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪನ್ಯಾಸ, ಸಮ್ಮೇಳನಗಳು ಕಲಿಕೆ ಮತ್ತು ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯುವ ಗಣಿತ ಶಾಸ್ತ್ರಜ್ಞರನ್ನು ಹುಟ್ಟು ಹಾಕುವುದು ವಿಶ್ವವಿದ್ಯಾಲಯಗಳ ಮುಖ್ಯ ಗುರಿಯಾಗಿದೆ ಎಂದರು.
ಡಾ. ಪಾವಟೆ ಅವರು ಕನ್ನಡ ನಾಡಿನಲ್ಲಿ ಹುಟ್ಟಿರುವುದು ನಮ್ಮ ಸೌಭಾಗ್ಯ. ವಿದ್ಯಾರ್ಥಿಗಳೆಲ್ಲರೂ ಅವರ ಸಾಧನೆಯ ರೀತಿಯಲ್ಲಿ ಬೆಳೆಯಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ರ‍್ಯಾಂಗ್ಲರ್ ಡಾ. ಡಿ.ಸಿ. ಪಾವಟೆಯವರ 125ನೇ ಜನ್ಮ ದಿನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ಸಮ್ಮೇಳನದಲ್ಲಿ “ಅಮೂರ್ತ” ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಗಣಿತ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ. ಬಸವನಗೌಡ ಅವರನ್ನು ಸನ್ಮಾನಿಸಲಾಯಿತು. ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ, ವಿದ್ಯಾರ್ಥಿಗಳು ಸಮ್ಮೇಳನದ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಸಂಪನ್ಮೂಲ ತಜ್ಞರೊಂದಿಗೆ ಚರ್ಚಿಸಿ ಅವರಲ್ಲಿರುವ ಜ್ಞಾನವನ್ನು ಪಡೆದುಕೊಳ್ಳಲು ಸಲಹೆ ನೀಡಿದರು.
ವಿಶ್ರಾಂತ ಕುಲಪತಿ ಪ್ರೊ.ಎಚ್.ಬಿ. ವಾಲೀಕಾರ, ತರ್ಕವು ಗಣಿತ ಶಾಸ್ತ್ರದ ಅಡಿಪಾಯ ಎಂದರು.ಡಾ. ಆರ್ಯಕುಮಾರ ಚಂದ, ಪ್ರೊ.ಎನ್.ಬಿ. ನಡುವಿನಮನಿ, ಡಾ.ಜಿ. ಹರಿಹರನ, ಡಾ. ವೀರಣ್ಣ ಡಿ. ಬೋಳಿಶೆಟ್ಟಿ, ಪ್ರೊ.ಎಸ್.ಸಿ. ಶಿರಾಳಶೆಟ್ಟಿ, ಡಾ.ಸಿ. ಕೃಷ್ಣಮೂರ್ತಿ, ಪ್ರೊ. ರಾಮಾಣೆ, ಡಾ.ಪಿ.ಜಿ. ಪಾಟೀಲ್ ಇದ್ದರು. ಡಾ.ಪಿ.ಜಿ. ಪಾಟೀಲ್ ಸ್ವಾಗತಿಸಿದರು. ಸಾನಿಯಾ ಜಿದ್ದಿ ಮತ್ತು ಸ್ವಾತಿ ನಿರೂಪಿಸಿದರು. ಡಾ.ಆರ್.ಎಸ್. ದ್ಯಾವನಾಳ ವಂದಿಸಿದರು.