ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಸುದೀರ್ಘವಾದರೂ ಇದೀಗ ಪ್ರಮುಖ ಹಂತಕ್ಕೆ ಬಂದು ನಿಂತಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಈ ಪ್ರಕರಣದಲ್ಲಿ ಅನೇಕರು ಮಾಫಿ ಸಾಕ್ಷಿಯಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಎರಡು ದಿನಗಳ ಹಿಂದಷ್ಟೇ ಪ್ರಕರಣದ ಮೊದಲನೇ ಆರೋಪಿ ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿದ್ದು, ವಿನಯ ಕುಲಕರ್ಣಿ ಅವರಿಗೆ ಈ ಬೆಳವಣಿಗೆ ಸಂಕಷ್ಟ ತಂದೊಡ್ಡಲಿದೆಯೇ ಎಂಬ ಚರ್ಚೆ ಶುರುವಾಗಿವೆ.ಕೊಲೆಯಾಗಿ ಎಂಟು ವರ್ಷ:
ಜಿಪಂನ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆಯಾಗಿ ಈಗ ಎಂಟು ವರ್ಷಗಳಾಗಿವೆ. 2016ರ ಜೂನ್ 15ರಂದು ಇಲ್ಲಿಯ ಸಪ್ತಾಪುರ ಬಡಾವಣೆಯ ತಮ್ಮದೇ ಮಾಲೀಕತ್ವದ ಉದಯ್ ಜಿಮ್‌ನಲ್ಲಿ ಯೋಗೀಶಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಬಳಿಕ ಇದೊಂದು ಜಮೀನು ವಿವಾದದ ಪ್ರಕರಣವೆಂದು ಪೊಲೀಸ್ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿತ್ತು. ಆದರೆ, ತದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಬದಲಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐನ ತನಿಖೆಯಿಂದ ನಿಜವಾದ ಆರೋಪಿಗಳ ಬಂಧನವಾಯಿತು. ತನಿಖೆ ಮಾಡಿದ್ದ ಪೊಲೀಸ್ ಅಧಿಕಾರಿಗಳೇ ಸಿಬಿಐನ ವಿಚಾರಣೆ ಎದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ತಿರುಗಿದ ಬಿದ್ದ ಮುತ್ತಗಿ:
ಇನ್ನು, ಇದೇ ಪ್ರಕರಣದ ಸಾಕ್ಷಿನಾಶ ಆರೋಪದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರಗಿದ್ದಾರೆ. ಈಗ ಆಗಿರುವ ಮಹತ್ವದ ಬೆಳವಣಿಗೆ ಏನೆಂದರೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ್ದ ವಿಚಾರಣೆಯಲ್ಲಿ ಮೊದಲನೇ ಆರೋಪಿಯಾಗಿದ್ದ ಬಸವರಾಜ ಮುತ್ತಗಿ ಮಾಫಿ ಸಾಕ್ಷಿ ಆಗಿರುವುದು. ಸಹಜವಾಗಿ ಇದು ವಿನಯ ಕುಲಕರ್ಣಿ ಅವರಿಗೆ ಸಂಕಷ್ಟ ಆಗಲಿದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.ವಿನಯ ಕುಲಕರ್ಣಿ ಪರಮಾಪ್ತನಾಗಿದ್ದ ಬಸವರಾಜ ಮುತ್ತಗಿ ಸಿಬಿಐ ವಿಚಾರಣೆ ವೇಳೆ ಎಲ್ಲಿಯೂ ಅವರ ವಿರುದ್ಧ ಒಂದೇ ಒಂದು ಹೇಳಿಕೆ ನೀಡಿರಲಿಲ್ಲ. ಆದರೆ, ಸಿಬಿಐ ವಿಚಾರಣೆ ಒಂದು ಹಂತಕ್ಕೆ ಬಂದಾಗ ಮುತ್ತಗಿಯನ್ನೇ ಮುಗಿಸಲು ವಿನಯ ಕುಲಕರ್ಣಿ ಸುಪಾರಿ ಕೊಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತು. ಆ ಸಂದರ್ಭದಲ್ಲಿ ಒಂದು ಕ್ಷಣ ತಬ್ಬಿಬ್ಬಾದ ಮುತ್ತಗಿ ತನ್ನ ಗುರು ವಿನಯ ಕುಲಕರ್ಣಿ ವಿರುದ್ಧ ಹೇಳಿಕೆ ನೀಡಿರುವುದನ್ನು ಈಗ ಸ್ಮರಿಸಬಹುದು.
ತಪ್ಪೊಪ್ಪಿಗೆ ಅರ್ಜಿ:ಮಹತ್ವದ ಬೆಳವಣಿಗೆಯೊಂದರಲ್ಲಿ ಮುತ್ತಗಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ಮಾಫಿ ಸಾಕ್ಷಿಯಾಗಿ ಆಗಲು ಅರ್ಜಿ ಸಲ್ಲಿಸಿದ್ದನು. ಆದರೆ, ನ್ಯಾಯಾಲಯವು ಮೊದಲಿಗೆ ಸೆಕ್ಷನ್ 164 ನಡಿ ಹೇಳಿಕೆ ದಾಖಲಿಸಿ, ಬಳಿಕ ನ್ಯಾಯಾಲಯ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು. ಅದೇ ರೀತಿಯಲ್ಲಿ ಮುತ್ತಗಿ ತನ್ನ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಿದ್ದಾನೆ. ಅದರ ಮರುದಿನವೇ ನ್ಯಾಯಾಲಯ ಬಸವರಾಜ ಮುತ್ತಗಿಗೆ ಮಾಫಿ ಸಾಕ್ಷಿಯಾಗಲು ಅನುಮತಿ ನೀಡಿದೆ. ಇದು ಸಹಜವಾಗಿ ಈ ಪ್ರಕರಣದ ಪ್ರಮುಖ ಆರೋಪಿ ವಿನಯ ಕುಲಕರ್ಣಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹಾಗೆಯೇ, ಈ ಪ್ರಕರಣದಲ್ಲಿ ಒಟ್ಟು 123 ಸಾಕ್ಷಿಗಳಿದ್ದಾರೆ. ಈ ಮುಂಚೆ ಪ್ರಮುಖ ಆರೋಪಿಗಳ ಪೈಕಿ ಇಬ್ಬರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಮಾಫಿ ಸಾಕ್ಷಿಯಾಗಿದ್ದರು. ಇದೀಗ ಅವರ ಪಟ್ಟಿಗೆ ಮೊದಲನೇ ಆರೋಪಿ ಮುತ್ತಗಿ ಸೇರ್ಪಡೆಯಾಗಿದ್ದು, ಸಿಬಿಐ ವಾದಕ್ಕೆ ಬಲ ತುಂಬಿದಂತಾಗಿದೆ.ಜೀವ ಬೆದರಿಕೆಗೆ ಭದ್ರತೆ:
ಈ ಮಧ್ಯೆ, ತನಗೆ ಹಾಗೂ ತನ್ನ ಕುಟುಂಬಕ್ಕೆ ಪ್ರಕರಣದ 9ನೇ ಆರೋಪಿ ಅಶ್ವತ್ಥನಿಂದ ಜೀವ ಬೆದರಿಕೆ ಇದೆ ಎಂದು ಬಸವರಾಜ ಮುತ್ತಗಿ ನ್ಯಾಯಾಲಯಕ್ಕೆ ಹೇಳಿದ್ದನು. ಇದೇ ವೇಳೆ ತಾನು ತಪ್ಪೊಪ್ಪಿಗೆ ನೀಡುತ್ತೇನೆ ಎಂದು ಹೇಳಿದ ಬಳಿಕ ಜೀವ ಬೆದರಿಕೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ನ್ಯಾಯಾಲಯ ಬಸವರಾಜ ಮುತ್ತಗಿ ಹಾಗೂ ಆತನ ಕುಟುಂಬಕ್ಕೆ ಭದ್ರತೆ ನೀಡುವಂತೆ ಆದೇಶ ನೀಡಿದ್ದು, ಸಿಬಿಐ ಅಧಿಕಾರಿಗಳು ಬುಧವಾರಷ್ಟೇ ಕೆಲಗೇರಿ ರಸ್ತೆಯಲ್ಲಿರುವ ಅವರ ಮನೆಗೆ ಭೇಟಿ ನೀಡಿ ಭದ್ರತೆ ಭರವಸೆ ನೀಡಿದ್ದರು. ಅಂತೆಯೇ, ಗುರುವಾರದಿಂದ ಒಂಭತ್ತು ಸಿಬ್ಬಂದಿ ಶಸ್ತ್ರಾಸ್ತ್ರಗಳೊಂದಿಗೆ ಮುತ್ತಗಿ ಮನೆಗೆ ಬಂದಿದ್ದಾರೆ. ಇಷ್ಟರಲ್ಲಿಯೇ ಸಿಆರ್‌ಪಿಫ್‌ನ ಕೋಬ್ರಾ ತಂಡ ಸಹ ಮುತ್ತಗಿಗೆ ಭದ್ರತೆ ನೀಡಲಿದೆ.