ಸಾರಾಂಶ
ದಾವಣಗೆರೆ: ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಗೆ ಡಿಜೆ ಬಳಕೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಜೊತೆಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದು, ಡಿಜೆಗೆ ಅನುಮತಿ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ನಗರದ ಡಿಸಿ ಕಚೇರಿ ಆವರಣದಲ್ಲಿ ಸೋಮವಾರ ಸಂಜೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಜೊತೆಗೆ ಡಿಜೆ ಸಿಸ್ಟಂಗೆ ಅನುಮತಿ ನೀಡುವ ವಿಚಾರದಲ್ಲಿ ನಡೆಸಿದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಾರ ಡಿಸಿ, ಎಸ್ಪಿ ಡಿಜೆ ಬಳಕೆ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದರ ವಿರುದ್ಧ ಪ್ರತಿಭಟಿಸಿದ್ದೆವು. ಈ ಹಿನ್ನೆಲೆಯಲ್ಲಿ ಇಂದು ಸಭೆ ಕರೆದಿದ್ದರು ಎಂದರು. ಸಮಸ್ಯೆಯನ್ನು ಸಾಮರಸ್ಯದಿಂದ ಪರಿಹರಿಸಿಕೊಳ್ಳಲು ಬಂದಿದ್ದೆವು. ಡಿಸಿ ಜೊತೆಗೆ ಸಮಗ್ರ ಚರ್ಚೆ ನಡೆಸಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಜೊತೆಗೆ ಚರ್ಚಿಸಿ, ಡಿಜೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಸಿಹಿ ಸುದ್ದಿ ಸಿಗಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಡಿಜೆಗೆ ಅವಕಾಶ ಸಿಕ್ಕೇ ಸಿಗುತ್ತದೆ. ಇಲ್ಲವಾದರೆ ಎಲ್ಲರೊಂದಿಗೂ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಡೀಜೆಗಾಗಿ ಗಣೇಶೋತ್ಸವ ಸಮಿತಿಗಳು ಈಗಾಗಲೇ ಲಕ್ಷಾಂತರ ರು. ಹಣ ಕೊಟ್ಟಿದ್ದು, ಡೀಜೆಗೆ ಅನುಮತಿ ನೀಡದಿದ್ದರೆ ಡಿಜೆ ಮಾಲೀಕರು ಕೊಟ್ಟ ಹಣವನ್ನಂತೂ ವಾಪಾಸ್ಸು ಕೊಡುವುದಿಲ್ಲ. ಅಲ್ಲದೇ, ಯುವಕರಿಗೆ ಕ್ರೇಜ್ ಇದೆ. ಡೀಜೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಹುಬ್ಬಳ್ಳಿ-ಧಾರವಾಡದಲ್ಲಿ ಡಿಜೆಗೆ ಅವಕಾಶವನ್ನು ನೀಡಿದ್ದಾರೆ. ಇಲ್ಲಿ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಹಿಂದೂಗಳಿಗೆ ಅಲ್ಲಿ ಹೋಗಬೇಡಿ, ಇಲ್ಲಿ ಹೋಗಬೇಡಿ ಅಂತೆಲ್ಲಾ ಹೇಳುತ್ತಾರೆ. ಬೇರೆ ಮತದವರು ಹಳೆ ಪಿಬಿ ರಸ್ತೆ ಬಂದ್ ಮಾಡಿದಾಗ ನಿಮ್ಮ ಕಾನೂನು, ಕಟ್ಟಳೆಗಳು ಎಲ್ಲಿ ಹೋಗಿರುತ್ತವೆ? ಹಿಂದೂಗಳ ಭಾವನೆಗಳಿಗೆ ಧಕ್ಕೆಯಾದರೆ ನಾವೆಲ್ಲರೂ ಬೀದಿಗಿಳಿದು ಹೋರಾಟ ನಡೆಸುವುದಂತೂ ನಿಶ್ಚಿತ ಎಂದು ಎಚ್ಚರಿಕೆ ನೀಡಿದ ಅವರು, ಯುವ ಜನರು ಶಾಂತಿಯಿಂದ ಹಬ್ಬ ಆಚರಣೆ ಮಾಡಬೇಕು ಎಂದು ಅವರು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮುಖಂಡರಾದ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಆರ್.ಎಲ್.ಶಿವಪ್ರಕಾಶ, ತಾರೇಶ ನಾಯ್ಕ ಇತರರಿದ್ದರು.