ಕನ್ನಡಪ್ರಭ ವಾರ್ತೆ ಹಿರಿಯೂರು

ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಧೈರ್ಯ, ಪರಿಶ್ರಮ ಮತ್ತು ಆತ್ಮವಿಶ್ವಾಸ ಅತ್ಯಂತ ಮುಖ್ಯ. ಭಯವನ್ನು ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಾಲೂಕು ಶಿಕ್ಷಣ ಸಂಯೋಜನ ಅಧಿಕಾರಿ ಕೆ ರಂಗಸ್ವಾಮಿ ಹೇಳಿದರು.

ತಾಲೂಕಿನ ಯರಬಳ್ಳಿ ಗ್ರಾಮದ ಸರ್ಕಾರಿ ಪಿಎಂಶ್ರೀ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾರದಾ ಪೂಜೆ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪರೀಕ್ಷೆ ಎಂದರೆ ಭಯಪಡುವ ವಿಷಯವಲ್ಲ. ಅದು ವಿದ್ಯಾರ್ಥಿಗಳು ವರ್ಷಪೂರ್ತಿ ಕಲಿತ ಜ್ಞಾನವನ್ನು ಪರೀಕ್ಷಿಸುವ ಒಂದು ಅವಕಾಶ. ಮಕ್ಕಳು ಪರೀಕ್ಷೆ ಬಂದಾಗ ಆತಂಕಪಡದೇ ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು. ನಿಯಮಿತವಾಗಿ ಓದುವುದು, ಸಮಯಕ್ಕೆ ಸರಿಯಾಗಿ ಪುನರಾವಲೋಕನ ಮಾಡುವುದು ಮತ್ತು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಯಶಸ್ಸಿಗೆ ಸಹಾಯ ಮಾಡುತ್ತದೆ ಎಂದರು.

ಹಿರಿಯ ಮುಖ್ಯ ಶಿಕ್ಷಕ ನಾಗರಾಜ್ ಮಾತನಾಡಿ, ಶಾಲೆ ಎಂದರೆ ಕೇವಲ ಓದುವ ಸ್ಥಳ ಮಾತ್ರವಲ್ಲ. ಅದು ವ್ಯಕ್ತಿತ್ವ ರೂಪುಗೊಳ್ಳುವ ಪವಿತ್ರ ಸ್ಥಳ. ಅಲ್ಲಿ ಪಡೆದ ಜ್ಞಾನ, ಶಿಕ್ಷಕರ ಮಾರ್ಗದರ್ಶನ, ಸ್ನೇಹಿತರ ಜೊತೆಗಿನ ಅನುಭವಗಳನ್ನು ಜೀವನಪೂರ್ತಿ ಮರೆಯದೆ ನೆನಪಿಟ್ಟುಕೊಂಡು ಓದಿದ ಶಾಲೆಗೆ ಋಣಿಗಳಾಗಿರಬೇಕು. ನಿಮ್ಮೆಲ್ಲರ ಮುಂದಿನ ಶೈಕ್ಷಣಿಕ ಜೀವನ ಶುಭವಾಗಿರಲಿ ಎಂದರು.


ಈ ಸಂದರ್ಭದಲ್ಲಿ ಶಿಕ್ಷಕರಾದ ಸವಿತ, ಮಂಜುನಾಥ್, ಶಬಾನ ವಿಜಯಮ್ಮ, ಸಂತೋಷ್ ಕುಮಾರ್, ದರ್ಶನ್, ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಸುಮಲತಾ, ಮಾರ್ಗದರ್ಶಿ ಶಿಕ್ಷಕರಾದ ಶಶಿಕಲಾ, ಲಿಂಗರಾಜು, ಮಾರುತಿ, ಸಿ.ಬಿ.ಶಾರದಮ್ಮ, ದೈಹಿಕ ಶಿಕ್ಷಕ ಪಿ ರಾಜಪ್ಪ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.