ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವವರು ಬಹುತೇಕ ಬಡವರು, ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು.
ಹೂವಿನಹಡಗಲಿ: ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ನಾಗಲಿಂಗಸ್ವಾಮಿ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಯೋಜನೆಯಡಿ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೈದ್ಯಕೀಯ, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವವರು ಬಹುತೇಕ ಬಡವರು, ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು. ಖಾಸಗಿ ಕಾಲೇಜು ವಿದ್ಯಾರ್ಥಿಗಳ ಹಾಗೇ ವೈದ್ಯಕೀಯ, ಇಂಜಿನೀಯರ್ ಉನ್ನತ ಮಟ್ಟದ ಶಿಕ್ಷಣ ಪೂರೈಸುವತ್ತ ಗುರಿ ಇರಲಿ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ತರಬೇತಿ ವಿದ್ಯಾರ್ಥಿಗಳಿಗೆ ಒದಗಿಸುವುದು, ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ. ಪಿಯುಸಿ ಹಂತದಲ್ಲಿಯೇ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿ ಸ್ಪಷ್ಟಪಡಿಸಿಕೊಂಡು ಪಠ್ಯಕ್ರಮದ ಅಧ್ಯಯನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ ಅರ್ಥಮಾಡಿಕೊಂಡು ನಿರಂತರ ಅಭ್ಯಾಸ ನಡೆಸಬೇಕು ಎಂದರು.ತರಬೇತಿ ಕಾರ್ಯಕ್ರಮ ಕೇವಲ ಪರೀಕ್ಷಾ ಸಿದ್ಧತೆಯಾಗಿ ನೋಡದೆ ತಮ್ಮ ಸಾಮರ್ಥ್ಯ ಗುರುತಿಸಿಕೊಂಡು ಅದನ್ನು ಬೆಳೆಸಿಕೊಳ್ಳುವ ಅವಕಾಶ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಕೊರತೆಯಿಲ್ಲ, ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶಗಳು ದೊರೆತರೆ ಅವರು ಯಾವುದೇ ಮಟ್ಟದ ಸ್ಪರ್ಧೆ ಸಮರ್ಥವಾಗಿ ಎದುರಿಸಬಲ್ಲರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಟ್ರಗೌಡ ಅಯ್ಯನಗೌಡ್ರ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯ ರೂಪಿಸುವಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪ್ರಮುಖ ಪಾತ್ರ ವಹಿಸುತ್ತದೆ. ಪಿಯುಸಿ ಹಂತದಲ್ಲಿಯೇ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಗುರಿ ನಿಗದಿಪಡಿಸಿಕೊಂಡು ವ್ಯವಸ್ಥಿತವಾಗಿ ಸಿದ್ಧತೆ ನಡೆಸುವುದು ಅಗತ್ಯ ಎಂದು ಹೇಳಿದರು.ಸಿಇಟಿ ಸೇರಿದಂತೆ ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಪಠ್ಯಪುಸ್ತಕದ ಜ್ಞಾನ ಮಾತ್ರವಲ್ಲದೆ ಪರಿಕಲ್ಪನೆಗಳ ಸ್ಪಷ್ಟ ಅರಿವು, ನಿರಂತರ ಅಭ್ಯಾಸ ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸವೂ ಮುಖ್ಯವಾಗಿವೆ. ಸರ್ಕಾರ ಕಲ್ಪಿಸಿರುವ ಈ ತರಬೇತಿ ಅವಕಾಶ ವಿದ್ಯಾರ್ಥಿಗಳು ಸಂಪೂರ್ಣ ಸದುಪಯೋಗಪಡಿಸಿಕೊಂಡು ತಮ್ಮ ಶೈಕ್ಷಣಿಕ ಸಾಮರ್ಥ್ಯ ಮತ್ತಷ್ಟು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕ ಬಸೆಟ್ಟಿ ಪ್ರಕಾಶ್, ಎ.ಶಿವಕುಮಾರ್, ನಟರಾಜ್ ಪಾಟೀಲ್, ಶ್ರೀಕಾಂತ್ ಬಂಡಿಹಾಳ್, ಮಂಜುನಾಥ್ ಡಿ. ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.