ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಕಳೆದ 10 ವರ್ಷಗಳ ಹೋರಾಟ ಫಲವಾಗಿ ಎನ್‌ಪಿಎಸ್ ಹೋರಾಟವು ಒಂದು ತಾರ್ಕಿಕ ಹಂತಕ್ಕೆ ಬಂದಿದೆ. ಸರ್ಕಾರದ ಬಜೆಟ್ ಮಂಡನೆಯಾಗುವುದರೊಳಗೆ ಎನ್‌ಪಿಎಸ್ ರದ್ದಾಗುವ ವಿಶ್ವಾಸವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತೇಜ್ ಹೇಳಿದರು.ಪಟ್ಟಣದ ಬಸವೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಒಪಿಎಸ್ ಹಕ್ಕೊತ್ತಾಯ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರವು ಎನ್‌ಪಿಎಸ್ ರದ್ದು ಮಾಡುವುದು ಸರ್ಕಾರಿ ನೌಕರರ ಆರ್ಥಿಕ ವಿಚಾರವಲ್ಲ. ಅದು ಗೌರವವದ ವಿಚಾರವಾಗಿದೆ. ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಎಲ್ಲ ಸರ್ಕಾರಿ ನೌಕರ ಬಾಂಧವರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಕ್ಕಾಗಿ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟ ಪ್ರತಿಫಲವಾಗಿ ಈಗಾಗಲೇ ೧೧,೩೦೦ ಸರ್ಕಾರಿ ನೌಕರ ಬಾಂಧವರಿಗೆ ಹಳೆ ಪಿಂಚಣಿ ಯೋಜನೆ ಅನ್ವಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಇಲಾಖೆಯ ಸರ್ಕಾರಿ ಎನ್‌ಪಿಎಸ್ ನೌಕರ ಬಾಂಧವರಿಗೆ ಒಪಿಎಸ್ ಅನ್ವಯವಾಗುವದರಲ್ಲಿ ಸಂದೇಹವಿಲ್ಲ. ಈಗಾಗಲೇ ಸಿಎಂ ಸೇರಿದಂತೆ ಎಲ್ಲ ಸಚಿವರೊಂದಿಗೆ ಈ ವಿಷಯ ಕುರಿತು ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಎನ್‌ಪಿಎಸ್ ರದ್ದಾಗಿ ಒಪಿಎಸ್ ಜಾರಿಗೆಯಾಗುವುದರಲ್ಲಿ ಸಂದೇಹವಿಲ್ಲ. ಒಪಿಎಸ್ ಜಾರಿಗೆಯಾಗುವವರೆಗೂ ನಮ್ಮ ಹೋರಾಟದ ಮೂಲಕ ಸರ್ಕಾರ ನಮ್ಮ ಹಕ್ಕೊತ್ತಾಯ ಮುಟ್ಟಿಸಬೇಕಾದ ಅಗತ್ಯವಿದೆ. ಇದುವರೆಗೂ ನಾವು ಕೈಗೊಂಡಿರುವ ಹತ್ತು ಹಲವಾರು ಹೋರಾಟಗಳಿಗೆ ರಾಜ್ಯದ ಎಲ್ಲ ಇಲಾಖೆಯ ವಿವಿಧ ಸಂಘಟನೆಗಳು ತುಂಬಾ ಬೆಂಬಲ, ಸಹಕಾರ ನೀಡಿದ್ದಾರೆ ಎಂದರು.
ರಾಜ್ಯ ಸರ್ಕಾರವು ಪ್ರಸ್ತುತ ಎನ್‌ಪಿಎಸ್ ಯೋಜನೆಗೆ ಶೇ.೧೪ ರಷ್ಟು ಅಂದರೆ ವಾರ್ಷಿಕವಾಗಿ ರೂ. ೧೮೭೫ ಕೋಟಿಗಳ ಅನುದಾನವನ್ನು ಎನ್‌ಎಸ್‌ಡಿಎಲ್‌ಗೆ ಪಾವತಿಸಬೇಕಾಗುತ್ತದೆ. ಜೊತೆಗೆ ಹಳೆ ಪಿಂಚಣಿಗೆ ಒಳಪಡುವ ನೌಕರರಿಗೂ ಸುಮಾರು ೨೨,೧೯೩ ಕೋಟಿಗಳನ್ನು ಪಾವತಿಸಬೇಕಾಗುತ್ತದೆ. ಪ್ರಸ್ತುತ ಎನ್‌ಪಿಎಸ್ ಯೋಜನೆಯ ಬಾಬ್ತು ಸರ್ಕಾರವು ಪಾವತಿಸುವ ಮೊತ್ತವು ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಿದ್ದಲ್ಲಿ ರಾಜ್ಯ ಸರ್ಕಾರವು ಪ್ರಸ್ತುತ ಎನ್‌ಪಿಎಸ್ ಯೋಜನೆಗೆ ಶೇ.೧೪ ರಷ್ಟು ಪಾವತಿಸುವ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ. ಇದು ದೂರಗಾಮಿಯಾಗಿ ರಾಜ್ಯದ ಆರ್ಥಿಕ ಸಬಲೀಕರಣದೊಂದಿಗೆ ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ ಎಂದರು.ಈಗಾಗಲೇ ಎನ್‌ಪಿಎಸ್ ನೌಕರರ ಬಾಬ್ತು ನೌಕರರ ವಂತಿಗೆ ೮೩೦೮,೬೧,೫೭,೨೧೧ ಕೋಟಿಗಳನ್ನು ನೌಕರರ ಜಿಪಿಎಫ್ ಖಾತೆಗೆ ವರ್ಗಾಯಿಸಿದ್ದಲ್ಲಿ ಈ ಮೊತ್ತವು ಸಹ ಪರೋಕ್ಷವಾಗಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಲಭ್ಯವಾಗುತ್ತದೆ ಎಂದರು.
ನಮ್ಮ ಹೋರಾಟಕ್ಕೆ ಜಯ ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಹೋರಾಟ ಫಲವಾಗಿ ಈಗಾಗಲೇ ೧೧,೩೦೦ ಸರ್ಕಾರಿ ನೌಕಕರಿಗೆ ಹಳೆ ಪಿಂಚಣಿ ಯೋಜನೆ ಅನ್ವಯವಾಗಿದೆ. ಈ ನೌಕರ ಬಾಂಧವರು ನಮ್ಮ ಹೋರಾಟಕ್ಕೆ ನೈತಿಕವಾಗಿ ಬೆಂಬಲ ನೀಡಿ ಉಳಿದ ೩ ಲಕ್ಷ ನೌಕರರ ಬಾಂಧವರಿಗೂ ಹಳೆ ಪಿಂಚಣಿ ಯೋಜನೆ ಅನ್ವಯವಾಗುವವರೆಗೂ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಡಲಗೇರಿ, ಸದಾಶಿವ ಕಾಂಬ್ಳೆ, ಎನ್‌ಪಿಎಸ್ ನೌಕರರ ಸಂಘದ ತಾಲೂಕಾಧ್ಯಕ್ಷ ರಮೇಶ ಬೆಳ್ಳುಬ್ಬಿ ಮಾತನಾಡಿದರು.
ಚಿಂತನಾ ಸಭೆಯಲ್ಲಿ ಚಿದಾನಂದ ಕೆಂಚನಗೌಡ, ಗುರುರಾಜ ಕುಲಕರ್ಣಿ, ಮಹಾದೇವ ವರ್ಮಾ, ಶಂಕರ ಖಂಡೇಕರ, ಸಲೀಂ ದಡೇದ, ಸಂತೋಷ ಬೂದಿಹಾಳ, ಶಿವಪ್ಪ ಮಡಿಕೇಶ್ವರ, ಕೊಟ್ರೇಶ ಹೆಗಡ್ಯಾಳ, ಎಚ್.ಬಿ.ಬಾರಿಕಾಯಿ, ಹೊನ್ನಪ್ಪ ಗೊಳಸಂಗಿ, ಚಿದಾನಂದ ಹೂಗಾರ, ಹಣಮಂತ ಬೂದಿಹಾಳ, ಬಸವರಾಜ ಹಂಚಲಿ, ಶಿವಪುತ್ರ ಅಂಕದ, ಬಿ.ಬಿ.ಚಿಂಚೋಳಿ, ಎಸ್.ಬಿ.ಮುತ್ತಗಿ, ಸಂಗಮೇಶ ಮಂಚೂರ, ಮಹಾಂತೇಶ ಕಾಳಗಿ, ಎಸ್.ಬಿ.ದಳವಾಯಿ, ಈರಬಸು ಕಾರಕೂನ, ಮಂಜುನಾಥ ಮುಳವಾಡ, ರಮೇಶ ದಾನಿ, ಗಂಗಾದೇವಿ ಪಾಟೀಲ, ಹಣಮಂತ ಬೂದಿಹಾಳ, ಸದಾಶಿವ ಹೊನವಾಡ, ಎಂ.ಆರ್.ರಾಜನಾಳ, ಎಂ.ವಿ.ಜೋಗಿ, ಮಹೇಂದ್ರ ಬಡಿಗೇರ, ಬಸವರಾಜ ಕೋಣಿನ, ಸಿದ್ದು ಬಾಗೇವಾಡಿ, ಆನಂದ ಗೌಡರ, ಪ್ರಭು ಮೇಟಿ, ಎಚ್.ಎ.ಕುಂದರಗಿ, ಬಿ.ವಿ.ಚಕ್ರಮನಿ, ಗುರುನಾಥ ಹೊರ್ತಿ, ಬಸವರಾಜ ಗೊಳಸಂಗಿ, ಗಿರೀಶ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ನೌಕರ ಬಾಂಧವರು ಭಾಗವಹಿಸಿದ್ದರು. ಚಿಂತನಾ ಸಭೆಗೂ ಮುನ್ನ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸರ್ಕಾರಕ್ಕೆ ಓಪಿಎಸ್ ಜಾರಿಗೆ ತರುವಂತೆ ಸಮಸ್ತ ನೌಕರರ ಬಾಂಧವರು ಆಗ್ರಹಿಸಿದರು.