ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಈ ಬಾರಿಯೂ ಬಿಜೆಪಿ ಹೈಕಮಾಂಡ್ ಸಂಸದ ರಮೇಶ ಜಿಗಜಿಣಗಿಗೆ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಜಿಪಂ ಮಾಜಿ ಸದಸ್ಯ ಅಣ್ಣಪ್ಪ ಸಾಹುಕಾರ ಖೈನೂರ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಸುಳ್ಳು ಸುದ್ದಿ, ಊಹಾಪೋಹ ಹರಡಿಸುತ್ತಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ, ಅವರಿಗೆ ಟಿಕೆಟ್ ಸಿಗಲ್ಲ ಅಂತ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಆದರೆ, ಸಂಸದ ರಮೇಶ ಜಿಗಜಿಣಗಿ ಅವರು ಸದೃಢವಾಗಿ ಆರೋಗ್ಯದಿಂದಲೇ ಇದ್ದಾರೆ. ಸುಳ್ಳು ಸುದ್ದಿ ಹರಡುತ್ತಿರುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಅಂತ ಪ್ರಾರ್ಥಿಸುತ್ತೇವೆ ಎಂದರು.
ರಮೇಶ ಜಿಗಜಿಣಗಿ ಅವರಂತಹ ಸಮಾಜ ಸೇವಕ ಹುಡುಕಿದರೂ ಸಿಗಲ್ಲ. ಈ ಬಾರಿ ಕೂಡ ಸಂಸದ ರಮೇಶ ಜಿಗಜಿಣಗಿ ಅವರಿಗೆ ಬಿಜೆಪಿ ಟಿಕೆಟ್ ಸಿಗುತ್ತೆ. ಮತ್ತೆ ಜಿಲ್ಲೆಯ ಜನರ ಆಶೀರ್ವಾದದಿಂದ ಅಭೂತಪೂರ್ವ ಮತಗಳ ಅಂತರದಲ್ಲಿ ಗೆಲ್ಲುತ್ತಾರೆಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.ಸಂಸದರು ಕಟ್ಟ ಕಡೆಯ ಬಡ ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಕಳೆದ ಅವಧಿಯಲ್ಲಿ ಅಪಾರ ಪ್ರಮಾಣದ ಅನುದಾನ ಜಿಲ್ಲೆಗೆ ತಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು, ವಿಮಾನ ನಿಲ್ದಾಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ, ಕೃಷಿ ವಿಕಾಸ ಯೋಜನೆ ಅಡಿ ಕಾಮಗಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕೋಟಿ ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಕಳೆದ 10 ವರ್ಷದಲ್ಲಿ ಒಟ್ಟು ₹23,78,22,137.65 ಕೋಟಿ ಅನುದಾನವನ್ನ ಕೇಂದ್ರದಿಂದ ಜಿಲ್ಲೆಗೆ ತಂದ ಶ್ರೇಯಸ್ಸು ಜನ ಸೇವಕ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಲ್ಲುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಬಾಲಚಂದ್ರ ವಾಲಿ, ಅರವಿಂದ ಗಿಳಘಂಟಿ, ಬಸವರಾಜ ಹತ್ತಿ, ನಾಗುಗೌಡ ಪಾಟೀಲ, ಪ್ರಕಾಶ ಮುಂಜಿ, ಜಿ.ವೈ.ಗೊರನಾಳ, ಚನ್ನಬಸು ಮಸಳಿ, ಶೇಕು ಲೋಣಿ ಉಪಸ್ಥಿತರಿದ್ದರು.ಸಂಸದ ರಮೇಶ ಜಿಗಜಿಣಗಿ ಕಳೆದ 15 ವರ್ಷಗಳಿಂದ ವಿಜಯಪುರ ಸಂಸದರಾಗಿ ಜನ ಸೇವೆ ಮಾಡುತ್ತಿದ್ದಾರೆ. ಜಿಲ್ಲೆ, ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಬಲವರ್ಧನೆ, ಸಂಘಟನೆಯನ್ನು ಬಹಳ ಚಾಣಾಕ್ಷತನದಿಂದ ಕಟ್ಟಿ ಬೆಳೆಸಿದ್ದಾರೆ. ಸಂಸದರಾದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವಿಸುತ್ತಿದ್ದಾರೆ.-ಅಣ್ಣಪ್ಪ ಸಾಹುಕಾರ ಖೈನೂರ,
ಜಿಪಂ ಮಾಜಿ ಸದಸ್ಯರು.