ನ್ಯಾಯಾಲಯದ ಆದೇಶ ಪಾಲಿಸದ ಕಚೇರಿ ಪೀಠೋಪಕರಣ ಜಪ್ತಿ

| Published : Feb 08 2025, 12:33 AM IST

ಸಾರಾಂಶ

ಕಚೇರಿಯ ಪೀಠೋಪಕರಣಗಳ ಜಪ್ತಿ ಕಾರ್ಯ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಕಾರ್ಯಪಾಲಕ ಅಭಿಯಂತರ ಚಂದ್ರೇಗೌಡ ನೇತೃತ್ವದ ಇಂಜಿನಿಯರುಗಳ ತಂಡ ಒಂದೆರಡು ದಿನಗಳ ಕಾಲಾವಕಾಶ ನೀಡಿದರೆ ಭೂ ಪರಿಹಾರದ ಹಣವನ್ನು ನ್ಯಾಯಾಲಯಕ್ಕೆ ಪಾವತಿಸುವುದಾಗಿ ಭರವಸೆ ನೀಡಿ ಜಪ್ತಿ ಮಾಡಿದ್ದ ಪೀಠೋಪಕರಣಗಳನ್ನು ಹಿಂತಿರುಗಿಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನ್ಯಾಯಾಲಯದ ತೀರ್ಪು ಮತ್ತು ಡಿಕ್ರಿ ಆದೇಶದ ಭೂ ಪರಿಹಾರ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಪಟ್ಟಣದ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಎಚ್.ಎಲ್.ಬಿ.ಸಿ. ನಂ.03ರ ಕಾರ್ಯಾಪಾಲಕ ಅಭಿಯಂತರರ ಕಚೇರಿ ಪೀಠೋಪಕರಣಗಳನ್ನು ರೈತರ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು.

ಹೇಮಾವತಿ ನಾಲೆ ನಿರ್ಮಾಣಕ್ಕಾಗಿ ನೀರಾವರಿ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಹೆಚ್ಚಿನ ಪರಿಹಾರವನ್ನು ನೀಡುವಂತೆ ತಾಲೂಕಿನ ಬೂಕನಕೆರೆ ವ್ಯಾಪ್ತಿಯ 11 ಜನ ರೈತರು ಪಟ್ಟಣದ ವಕೀಲ ವಿ.ಎಸ್.ಧನಂಜಯ ಅವರ ಮೂಲಕ ಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಮತ್ತು ಶ್ರೀರಂಗಪಟ್ಟಣದ 3ನೇ ಅಪರ ಮತ್ತು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 11 ಜನ ರೈತರಿಗೆ ಒಟ್ಟು 1,05,52,084 ರು. ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಪರಿಹಾರದ ಹಣವನ್ನು ಇಲಾಖೆ ಸಕಾಲದಲ್ಲಿ ಪಾವತಿಸದ ಕಾರಣ ವಕೀಲ ವಿ.ಎಸ್.ಧನಂಜಯ ನ್ಯಾಯಾಲಯದ ಮೊರೆ ಹೋಗಿದ್ದರು. ವಕೀಲರ ಮನವಿ ಪರಿಗಣಿಸಿ 2025ರ ಜ.6 ರಂದು ನ್ಯಾಯಾಲಯ ಡಿಕ್ರಿ ಆದೇಶ ಹೊರಡಿಸಿ ಪರಿಹಾರದ ಹಣವನ್ನು ಜರೂರಾಗಿ ನ್ಯಾಯಾಲಯಕ್ಕೆ ಪಾವತಿಸುವಂತೆ ಆದೇಶಿಸಿತ್ತು.

ಡಿಕ್ರಿ ಆದೇಶ ಹೊರಡಿಸಿ ಒಂದು ತಿಂಗಳು ಕಳೆದರೂ ನೀರಾವರಿ ಇಲಾಖೆ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಇಂದು ರೈತರ ಸಮ್ಮುಖದಲ್ಲಿ ಪಟ್ಟಣದ ಎಚ್.ಎಲ್.ಬಿ.ಸಿ ನಂ.03 ಕಾರ್ಯಾಪಾಲಕ ಅಭಿಯಂತರರ ಕಚೇರಿಗೆ ಆಗಮಿಸಿದ ನ್ಯಾಯಾಲಯದ ಅಮೀನರುಗಳಾದ ಡಿ.ಕೆ.ಸುರೇಶ್, ದೇವರಾಜು, ಮಂಜುನಾಥ್ ಮತ್ತು ಸುನಿಲ್ ಅವರ ತಂಡ ಪೀಠೋಪಕರಣಗಳನ್ನು ಜಪ್ತಿ ಮಾಡಿ ಕಚೇರಿಗೆ ಬೀಗ ಹಾಕುವ ಪ್ರಕ್ರಿಯೆಗೆ ಮುಂದಾಯಿತು.

ಕಚೇರಿಯ ಪೀಠೋಪಕರಣಗಳ ಜಪ್ತಿ ಕಾರ್ಯ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಕಾರ್ಯಪಾಲಕ ಅಭಿಯಂತರ ಚಂದ್ರೇಗೌಡ ನೇತೃತ್ವದ ಇಂಜಿನಿಯರುಗಳ ತಂಡ ಒಂದೆರಡು ದಿನಗಳ ಕಾಲಾವಕಾಶ ನೀಡಿದರೆ ಭೂ ಪರಿಹಾರದ ಹಣವನ್ನು ನ್ಯಾಯಾಲಯಕ್ಕೆ ಪಾವತಿಸುವುದಾಗಿ ಭರವಸೆ ನೀಡಿ ಜಪ್ತಿ ಮಾಡಿದ್ದ ಪೀಠೋಪಕರಣಗಳನ್ನು ಹಿಂತಿರುಗಿಸುವಂತೆ ಮನವಿ ಮಾಡಿದರು.

ತಮ್ಮ ವಕೀಲರನ್ನು ಸಂಪರ್ಕಿಸಿ ಇಲಾಖೆ ಮನವಿಯನ್ನು ಪುರಸ್ಕರಿಸಿದ ರೈತರು ಜಪ್ತಿ ಕಾರ್ಯವನ್ನು ಸ್ಥಗಿತಗೊಳಿಸಿದರು. ಒಂದೆರಡು ದಿನಗಳಲ್ಲಿ ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಅದಕ್ಕೆ ಸ್ಥಳೀಯ ಇಂಜಿನಿಯರುಗಳೇ ಜವಾಬ್ದಾರರಾಗಬೇಕಾಗುತ್ತದೆಂದು ಎಚ್ಚರಿಸಿ ತೆರಳಿದರು.