ಬಿಜೆಪಿ-ಕಾಂಗ್ರೆಸ್‌ನಲ್ಲಿ ಕರಗಿತು ಸಂಘರ್ಷ, ಅಭ್ಯರ್ಥಿಗಳು ನಿರಾಳ

| Published : Apr 24 2024, 02:21 AM IST

ಬಿಜೆಪಿ-ಕಾಂಗ್ರೆಸ್‌ನಲ್ಲಿ ಕರಗಿತು ಸಂಘರ್ಷ, ಅಭ್ಯರ್ಥಿಗಳು ನಿರಾಳ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಮಾರಂಭದಲ್ಲಿ ಅಸಮಧಾನಗೊಂಡಿದ್ದ ಬಿ.ವಿ.ನಾಯಕ ಅವರು ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಪಕ್ಕದಲ್ಲಿಯೇ ಕುಳಿತುಕೊಂಡಿರುವುದು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆ ಪೂರ್ವ ಇದ್ದಂತಹ ವಾತಾವರಣ ಗೊಂದಲ, ಸಂಘರ್ಷದ ವಾತಾವರಣ ಇದೀಗ ತಿಳಿಗೊಂಡಿದ್ದು, ಹೊಸ ಉತ್ಸಾಹದೊಂದಿಗೆ ಉಭಯ ಪಕ್ಷಗಳು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿವೆ.

ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಎದ್ದಿದ್ದ ಅಸಮಧಾನದಿಂದಾಗಿ ಪಕ್ಷದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಹಾಲಿ ಸಂಸದ ಹಾಗೂ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ಜೊತೆಗೆ ಟಿಕೆಟ್ಗಾಗಿ ಕೊನೆವರೆಗೂ ಸೆಣಸಾಟ ನಡೆಸಿದ್ದ ಮಾಜಿ ಸಂಸದ ಬಿ.ವಿ.ನಾಯಕ ಅವರು ತಮ್ಮ ಅಸಮಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ಪ್ರತ್ಯೇಕ ಸಭೆ, ಸಮಾರಂಭಗಳನ್ನು ನಡೆಸಿ ಪಕ್ಷದಲ್ಲಿ ಗೊಂದಲ ಉಂಟು ಮಾಡಿದ್ದರು. ಪಕ್ಷದ ಉಸ್ತುವಾರಿಗಳು ಸಂದಾನ ನಡೆಸಿದರು ಸಹ ಲೆಕ್ಕಿಸದ ಬಿ.ವಿ.ನಾಯಕ ಬಿ ಫಾರಂ ಇಲ್ಲದೇ ಬಿಜೆಪಿಯಿಂದ ನಾಮಪತ್ರವನ್ನು ಸಲ್ಲಿಸಿದ್ದರಿಂದ ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ಅವರ ಉಮೇದುವಾರಿಕೆ ತಿರಸ್ಕೃತವಾಯಿತು. ಆದರೂ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರೊಂದಿಗೆ ಕಾಣಿಸಿಕೊಳ್ಳದೇ ಕಣ್ಣಾಮುಚ್ಚಾಲೆ ಆಟವಾಡುತ್ತಾ ತಿರುಗುತ್ತಿದ್ದ ಬಿ.ವಿ.ನಾಯಕ ಅವರು ಅಸಮಧಾನದ ಬಿಟ್ಟು ಸೋಮವಾರ ಸಂಜೆ ಲಿಂಗಸುಗೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರತ್ಯೇಕ್ಷವಾಗಿ ಅಮರೇಶ್ವರ ನಾಯಕ ಅವರ ಪಕ್ಕದಲ್ಲಿಯೇ ಕುಳಿತುಕೊಳ್ಳುವುದರೊಂದಿಗೆ ಕ್ಷೇತ್ರದಾದ್ಯಂತ ಎದ್ದಿದ್ದ ಗೊಂದಲದ ಅಲೆಯನ್ನು ತೊಲಗಿಸಿದ್ದು, ಇದರಿಂದಾಗಿ ಅಮರೇಶ್ವರ ನಾಯಕ ಅವರು ನಿರಾಳಗೊಂಡಂತಾಗಿದೆ.

ಇನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಬೇರುಬಿಟ್ಟಿದ್ದ ಬಣ ರಾಜಕೀಯ, ಗುಂಪು ಸಂಘರ್ಷ, ದ್ವೇಷ ಅಸೂಯೆ, ಒಬ್ಬರಿಗೊಬ್ಬರು ಕಾಲೆಳೆಯುವ ಕಾರ್ಯದಿಂದಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಲೋಕಸಭಾ ಚುನಾವಣೆ ಘೊಷಣೆಯ ನಂತರವೂ ಈ ವಾತಾವರಣ ಮುಂದುವರಿದಿದ್ದರಿಂದ ಪಕ್ಷದಲ್ಲಿ ಉಸಿರುಗಟ್ಟುವ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಇದರ ಜೊತೆಗೆ ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎನ್ನುವ ಕೂಗು ಸಹ ಎದಿತ್ತು. ಇದರಿಂದಾಗಿ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಅವರಿಗೆ ಆರಂಭದಲ್ಲಿ ಕೊಂಚ ಸಮಸ್ಯೆ ಉಂಟಾಗಿತ್ತು. ಇದೀಗ ಒಂದು ವರ್ಷದಿಂದ ಖಾಲಿ ಉಳಿದಿದ್ದ ಡಿಸಿಸಿಗೆ ಅಧ್ಯಕ್ಷರ ಆಯ್ಕೆ, ಬಣ ಸಂಘರ್ಷ ಬಿಟ್ಟ ಮುಖಂಡರು ಪಕ್ಷದಲ್ಲಿ ಆಂತರಿಕ ಸಂಘರ್ಷ ಜೀವಂತವಾಗಿದ್ದರು ಸಹ ಅದನ್ನು ಬದಿಗಿಟ್ಟು ಒಟ್ಟಾಗಿ ಸೇರಿ ಅಭ್ಯರ್ಥಿ ಪರ ಪ್ರಚಾರ ಕಾರ್ಯವನ್ನು ನಡೆಸಿರುವುದು ಜಿ.ಕುಮಾರ ನಾಯಕ ಅವರಲ್ಲಿ ಆರಂಭದಲ್ಲಿ ಕಂಡಂತಹ ತಳಮಳವನ್ನು ಕರಗಿಸುವಂತೆ ಮಾಡಿದೆ.