ಶಾಂತಿ ಸ್ಥಾಪನೆಗೆ ಸಂಘರ್ಷ ಅನಿವಾರ್ಯ: ಶ್ರೀ ಸುಗುಣೇಂದ್ರ ತೀರ್ಥರು

| Published : Dec 05 2024, 12:31 AM IST

ಸಾರಾಂಶ

ಶಾಂತಿ ಸ್ಥಾಪನೆಗೆ ಸಂಘರ್ಷ ಅನಿವಾರ್ಯ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು. ಉಡುಪಿಯಲ್ಲಿ ಬೃಹತ್‌ ಜನಾಂದೋಲನ ಉದ್ದೇಶಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಕೃಷ್ಣ ಗೀತೆಯಲ್ಲಿ ಹಿಂಸೆಯನ್ನು ಬೋಧಿಸಿಲ್ಲ, ಆದರೆ ಅಹಿಂಸೆಯನ್ನು ಸಹಿಸಬಾರದು ಎಂದು ಹೇಳಿದ್ದಾನೆ. ಶಾಂತಿ ಸ್ಥಾಪನೆಗೆ ಸಂಘರ್ಷ ಮಾಡಬೇಕಾಗುತ್ತದೆ. ಶಾಂತಿಯಿಂದಿರುವುದು ದೌರ್ಬಲ್ಯ ಅಲ್ಲ, ಶಾಂತಿಯನ್ನು ರಕ್ಷಿಸುವುದಕ್ಕೆ ಏನು ಮಾಡುವುದಕ್ಕೂ ಸಿದ್ಧ ಎಂದು ತೋರಿಸಬೇಕಾದ ಕಾಲ ಈಗ ಬಂದಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಅವರು ಬುಧವಾರ ಉಡುಪಿಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಬೃಹತ್ ಜನಾಂದೋಲನವನ್ನು ಉದ್ದೇಶಿಸಿ ಮಾತನಾಡಿದರು.

ಹಿಂದುಗಳ ಮೇಲೆ ಬಾಂಗ್ಲಾದಲ್ಲಿ ಮಾತ್ರವಲ್ಲ ಭಾರತದಲ್ಲಿಯೂ ಅಕ್ರಮಣ ನಡೆಯುತ್ತಿದೆ. ಅದಕ್ಕೆ ವಕ್ಫ್‌ ಇತ್ತೀಚಿನ ಉದಾಹರಣೆಯಾಗಿದೆ. ಕೇವಲ ಸಂತ್ರಸ್ತರನ್ನು ರಕ್ಷಿಸಿದರೆ ಸಾಲದು, ಈ ಆಕ್ರಮಣದ ಹಿಂದೆ ಇರುವವರನ್ನು ಪತ್ತೆ ಮಾಡಿ ಮಟ್ಟ ಹಾಕುವುದು ಅತ್ಯಗತ್ಯ ಎಂದ ಶ್ರೀಗಳು, ಹಿಂದುಗಳು ಮಲಗಿದ ಹೆಬ್ಬಾವಿನಂತೆ, ಎಚ್ಚೆತ್ತುಕೊಂಡರೆ ತನ್ನ ಮೇಲೆ ಕಲ್ಲೆಸೆದವರನ್ನು ನುಂಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಾರೋಪ ಭಾಷಣ ಮಾಡಿದ ಕಟಪಾಡಿ ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು, ಹಿಂದುಗಳು ಪಕ್ಷ, ಜಾತಿಗಳನ್ನು ಪಕ್ಕಕ್ಕಿಟ್ಟು ಎಚ್ಚೆತ್ತುಕೊಳ್ಳಬೇಕು, ಇಲ್ಲದಿದ್ದಲ್ಲಿ ಬಾಂಗ್ಲಾದಲ್ಲಿ ಆದ ಸ್ಥಿತಿ ನಮ್ಮ ದೇಶದಲ್ಲಿಯೂ ಬರಬಹುದು ಎಂದರು.

ಬಾಂಗ್ಲಾದಲ್ಲಿರುವ ಹಿಂದುಗಳು ಸುರಕ್ಷಿತ ಆಗುವರೆಗೆ ಯಾವುದೇ ಸಹಕಾರ, ಸಹಾಯ ನೀಡುವುದಿಲ್ಲ, ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂದು ಸರ್ಕಾರ ಖಡಕ್‌ ಮಾತುಗಳಲ್ಲಿ ಹೇಳಬೇಕು. ಹಾಗಂತ ರಾಜ್ಯ, ಕೇಂದ್ರ ಸರ್ಕಾರಗಳ ಮೇಲೆ ಪ್ರತಿಯೊಬ್ಬ ಹಿಂದುವೂ ಒತ್ತಡ ಹೇರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಹಿರಿಯ ಅಯ್ಯಪ್ಪಭಕ್ತರಾದ ಗೋಪಾಲ ಗುರುಸ್ವಾಮಿ, ಉಡುಪಿ ಇಸ್ಕಾನ್ ನ ಪ್ರಮುಖರಾದ ರಕ್ತಚಂದನ ಗೋವಿಂದಾಸ್ ಜೀ ಉಪಸ್ಥಿತರಿದ್ದರು. ಉಡುಪಿಯ ಮಾತಾ ಅಮೃತಾನಂದಮಯಿ ಸಂಸ್ಥೆಯ ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್ ಮಾತನಾಡಿದರು. ಶ್ರೀನಿಧಿ ಹೆಗ್ಡೆ ಅವರು ರಾಷ್ಟ್ರಪತಿಗೆ ಕಳುಹಿಸುವ ಆಂದೋಲನದ ಆಗ್ರಹಗಳನ್ನು ಓದಿದರು.

ಸಾಮರಸ್ಯ ವೇದಿಕೆಯ ಮಂಗಳೂರು ವಿಭಾಗದ ಪ್ರಮುಖ್ ರವಿಂದ್ರ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬೃಹತ್ ಮೆರವಣಿಗೆ:

ಇದಕ್ಕೆ ಮೊದಲು ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ವಿವಿಧ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರ ಬೃಹತ್ ಮೆರವಣಿಗೆ ನಗರದುದ್ದಕ್ಕೂ ನಡೆಯಿತು. ಈ ಮೆರವಣಿಗೆಯನ್ನು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಿಂದೂ ಸಂಘಟನೆಗಳ ಪ್ರಮುಖರಾದ ಸುನಿಲ್ ಕೆ. ಆರ್., ದಿನೇಶ್ ಮೆಂಡನ್, ಬಿಜೆಪಿಯ ಪ್ರಮುಖರಾದ ವೀಣಾ ಶೆಟ್ಟಿ, ಗೀತಂಜಲಿ ಸುವರ್ಣ ಮುಂತಾದವರು ಭಾಗವಹಿಸಿದ್ದರು.

ನಾಲ್ವರನ್ನಾದರೂ ಹೆರಬೇಕು - ಕಾಳಹಸ್ತೇಂದ್ರ ಶ್ರೀ

ಸಮಾವೇಶದಲ್ಲಿ ಭಾಗವಹಿಸಿದ ಹಿಂದುಗಳ ಸಂಖ್ಯೆ ಕಡಿಮೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ದೇಶದಲ್ಲಿ ಹಿಂದುಗಳ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಹಿಂದುಗಳ ಸಂಖ್ಯೆ ಇಳಿಮುಖವಾಗಬಾರದು, ಹಿಂದುಗಳು ಅಲ್ಪಸಂಖ್ಯಾತರಾಗಬಾರದು. ವೇದಗಳಲ್ಲಿ ಅಷ್ಟ ಪುತ್ರ ಭವ ಎಂದು ಹೇಳಲಾಗಿದೆ, ಅಷ್ಟಾಗದಿದ್ದರೂ ಮನೆಗೆ, ಸಮಾಜಕ್ಕೆ, ಧರ್ಮಕ್ಕೆ, ದೇಶಕ್ಕಾಗಿ ನಾಲ್ಕು ಮಕ್ಕಳಾದರೂ ಪ್ರತಿ ಕುಟುಂಬದಲ್ಲಿ ಹುಟ್ಟಬೇಕು ಎಂದು ಶ್ರೀಗಳು ಕರೆ ನೀಡಿದರು.