ಸಾರಾಂಶ
ಉಚ್ಚಿಲ ದೇವಸ್ಥಾನದಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಮತ್ತು ಕಾಂಗ್ರೆಸ್‌ನ ರಾಜು ಪೂಜಾರಿ ಅವರ ಮುಖಾಮುಖಿ ಭೇಟಿಯಾಯಿತು. ಇಬ್ಬರೂ ಅಭ್ಯರ್ಥಿಗಳೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಲಘುಚಟಾಕಿ ಹಾರಿಸಿ, ನಕ್ಕು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಉಚ್ಚಿಲಉಡುಪಿ-ದ.ಕ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಮತಯಾಚನೆ ಬಿರುಸಿನಿಂದ ನಡೆಯುತ್ತಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಉಭಯ ಜಿಲ್ಲೆಗಳ ಮುಖ್ಯವಾಗಿ ಪ್ರಸ್ತುತ ನವರಾತ್ರಿಯಾದ್ದರಿಂದ ದೇವಿ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ಭಾನುವಾರ ರಾತ್ರಿ ಬಿಜೆಪಿಯ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಈ ಸಂದರ್ಭ ಮಹಾಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ನಡೆಯುತ್ತಿದ್ದ ಪೊಣ್ಣು ಪಿಲಿ ನಲಿಕೆ ಕಾರ್ಯಕ್ರಮವನ್ನು ಕೆಲಕಾಲ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ದೇವಾಲಯಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ಪಿಲಿ ನಲಿಕೆ ಕಾರ್ಯಕ್ರಮದೆಡೆಗೆ ಬಂದರು. ಆಗ ಪರಸ್ಪರ ಬಿಜೆಪಿಯ ಕಿಶೋರ್ ಕುಮಾರ್ ಮತ್ತು ಕಾಂಗ್ರೆಸ್‌ನ ರಾಜು ಪೂಜಾರಿ ಅವರ ಮುಖಾಮುಖಿ ಭೇಟಿಯಾಯಿತು.ಇಬ್ಬರೂ ಅಭ್ಯರ್ಥಿಗಳೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಲಘುಚಟಾಕಿ ಹಾರಿಸಿ, ನಕ್ಕು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರೂ ನಗುವಿನಲ್ಲಿ ಜೊತೆಯಾದರು.