ಸಾರಾಂಶ
ಬಿಜೆಪಿಯಲ್ಲಿ ಎಲ್ಲವೂ ಗೊಂದಲಮಯವಾಗಿದ್ದು, ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ಗೊಂದಲ ನಿವಾರಿಸುತ್ತಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ಬಿಜೆಪಿಯಲ್ಲಿ ಎಲ್ಲವೂ ಗೊಂದಲಮಯವಾಗಿದ್ದು, ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ಗೊಂದಲ ನಿವಾರಿಸುತ್ತಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿನ ಗೊಂದವನ್ನು ದೆಹಲಿ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಗೊಂದಲ ಇರುವುದು ಸತ್ಯ. ಆದರೆ ನಿವಾರಿಸುವ ಶಕ್ತಿ ಹೈಕಮಾಂಡ್ಗೆ ಮಾತ್ರ ಇದೆ. ಆದಷ್ಟು ಬೇಗ ವರಿಷ್ಠರು ಸರಿಯಾದ ಕ್ರಮ ಕೈಗೊಳ್ಳುತ್ತಾರೆ ಎಂದರು.ವಿಜಯೇಂದ್ರ ಪರವಾಗಿ ಮಾಜಿ ಶಾಸಕರು ಸಭೆ ನಡೆಸಿರುವ ವಿಚಾರದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ನಾನು ಯಾರ ಪರವಾಗಿಯೂ ಮಾತನಾಡುವುದಿಲ್ಲ. ಪಕ್ಷದ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಹೈಕಮಾಂಡ್ ಮಾಡಬೇಕಿದೆ ಎಂದರು.
ಕಾಂಗ್ರೆಸ್ನಲ್ಲಿಯೂ ಸಾಕಷ್ಟು ಅಸಮಾಧಾನ ಮತ್ತು ಒಳಜಗಳಗಳಿದ್ದು, ಅದು ಯಾವಾಗ ಹೊರ ಬೀಳುತ್ತೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕೆಲವರು ಮುಂದಾಗಿದ್ದು, ಸದ್ಯದಲ್ಲೇ ಕಾಂಗ್ರೆಸ್ ಜಗಳ ಬೀದಿಗೆ ಬರುವುದು ಗ್ಯಾರಂಟಿ. ಹಾಸನದಲ್ಲಿ ಸಮಾವೇಶಕ್ಕೆ ಅವರಲ್ಲೇ ಅಪಸ್ವರ ಕೇಳಿ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಭ್ರಷ್ಟಾಚಾರಕ್ಕೆ ಸ್ಪರ್ಧೆ
ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿಚಾರದಲ್ಲಿ ಸಚಿವರ ಮಧ್ಯೆಯೇ ಕಾಂಪಿಟೇಶನ್ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ನಾನು ಹೆಚ್ಚೋ ನೀನು ಹೆಚ್ಚೋ ಎಂಬ ಲೆಕ್ಕಾಚಾರ ನಡೆದಿದೆ. ಆಡಳಿತದಲ್ಲಿನ ಭ್ರಷ್ಟಾಚಾರ ನೋಡಿ ಸಾಕಾಗಿದೆ ಎಂದು ಹೇಳಿರುವ ಸಚಿವ ಆರ್.ಬಿ. ತಿಮ್ಮಾಪುರ ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯಾ? ಎಂದು ಶೆಟ್ಟರ್ ಪ್ರಶ್ನಿಸಿದರು. ವಕ್ಫ್ ಮಸೂದೆ ತಿದ್ದುಪಡಿಯ ಅವಧಿ ವಿಸ್ತರಣೆ ಮಾಡಲಾಗಿದೆ. ಬಜೆಟ್ ಅಧಿವೇಶನದ ವರೆಗೂ ಅವಧಿ ವಿಸ್ತರಣೆ ಮಾಡಲಾಗಿದೆ. ಬಜೆಟ್ ಅಧಿವೇಶನದ ವರೆಗೆ ಯಾವುದೇ ಬಿಲ್ ಅನುಮೋದನೆಯಾಗಲ್ಲ ಎಂದು ಶೆಟ್ಟರ ಹೇಳಿದರು.