ಸಾರಾಂಶ
ಷೇರು ಇದ್ದರೂ ಸಹಿತ ಸ್ಪರ್ಧೆಗೆ ಅವಕಾಶ ಇಲ್ಲ
ಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಪ್ರಕ್ರಿಯೆಯು ಅನೇಕ ಗೊಂದಲಗಳಲ್ಲಿ ನಡೆಯುತ್ತಿದ್ದು, ಸಂಬಂಧಿಸಿದ ಸಹಕಾರಿ ಇಲಾಖೆಯ ಅಧಿಕಾರಿಗಳು ಗೊಂದಲ ಬಗೆಹರಿಸಬೇಕಿದೆ.ದೋಟಿಹಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೇಸೂರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಹಳ್ಳಿಗಳ ಪೈಕಿ ನೂರಾರು ರೈತರ ಷೇರುಗಳು ಇದ್ದು, ಚುನಾವಣೆಯ ಮಾಹಿತಿ ಕೇಳಲು ಬಂದಿರುವ ಸಮಯದಲ್ಲಿ ಷೇರುದಾರರಿಗೆ ನಿಮ್ಮ ಷೇರು ನೂತನವಾಗಿ ರಚನೆಯಾಗಿರುವ ಕೇಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ವರ್ಗಾವಣೆ ಆಗಿದೆ. ನೀವು ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸುವ ಮೂಲಕ ಷೇರುದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಇದನ್ನು ಬಗೆಹರಿಸಬೇಕು ಎಂದು ಕೆಲ ರೈತರು ಒತ್ತಾಯಿಸಿದ್ದಾರೆ.
ಸಾಲಗಾರರಿಗೂ ಇಲ್ಲ ಅವಕಾಶ:ಕೇಸೂರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರು ಸಾಲ ಪಡೆದುಕೊಳ್ಳುವುದು, ವಾಪಸ್ ಕಟ್ಟುವ ಮೂಲಕ ಉತ್ತಮ ವ್ಯವಹಾರ ಮಾಡಿಕೊಂಡು ಬಂದಿದ್ದಾರೆ. ಅಂತಹ ರೈತರಿಗೂ ಸಹಿತ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡುತ್ತಿಲ್ಲ ಇಲ್ಲಿಯ ಅಧಿಕಾರಿಗಳು. ಒಟ್ಟಿನಲ್ಲಿ ಈ ಎರಡು ಸಹಕಾರ ಸಂಘಗಳ ಪೈಕಿ ಅನೇಕ ಗೊಂದಲಗಳು ಉಂಟಾಗಿದ್ದು ಸಹಕಾರಿ ಇಲಾಖೆಯ ಅಧಿಕಾರಿಗಳು ಕೂಡಲೆ ಕ್ರಮವಹಿಸಬೇಕಾಗಿದೆ.ನಾವು ಸಾಲಗಾರರಿದ್ದು, ಕೇಸೂರು ಸಹಕಾರಿ ಸಂಘಕ್ಕೆ ಬರುವುದರ ಕಾರಣ ನಮ್ಮ ಷೇರನ್ನು ವರ್ಗಾವಣೆ ಮಾಡಿದ್ದೇವೆ. ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಬರುವದಿಲ್ಲ ಎಂದು ಕಾರ್ಯದರ್ಶಿ ಹೇಳುತ್ತಿದ್ದು, ನಮಗೆ ಏನು ಮಾಡಬೇಕು ಎಂಬುದು ತಿಳಿಯದಂತಾಗಿದೆ. ಚುನಾವಣೆ ಸ್ಪರ್ಧೆ ಮಾಡಲು ಅವಕಾಶ ನೀಡಬೇಕು ಎನ್ನುತ್ತಾರೆ ಕೇಸೂರು ರೈತ ಮುತ್ತುರಾಜ ಹೊಸಲಕೊಪ್ಪ.
ನೂತನವಾಗಿ ರಚನೆಯಾಗಿರುವ ಕೇಸೂರು ಸಹಕಾರಿ ಸಂಘಕ್ಕೆ ಕೇಸೂರು ಗ್ರಾಪಂ ವ್ಯಾಪ್ತಿಯ ಷೇರುದಾರರ ವರ್ಗಾವಣೆ ಮಾಡಲಾಗಿದ್ದು, ಯಶಶ್ವಿನಿ ಯೋಜನೆಯ ಸಲುವಾಗಿ ಮಾತ್ರ ನಮ್ಮಲ್ಲಿ ಉಳಿಸಿಕೊಂಡಿದ್ದೇವೆ. ಅವರು ಚುನಾವಣೆಗೆ ಸ್ಪರ್ಧೆ ಮಾಡಲು ಬರುವುದಿಲ್ಲ ಎಂದು ದೋಟಿಹಾಳದ ಪ್ರಾ.ಕೃ.ಪ.ಸ.ಸಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ನರಸನಗೌಡ ಪಾಟೀಲ ತಿಳಿಸಿದ್ದಾರೆ.