2ನೇ ದಿನವೂ ಗೊಂದಲ, ಆಮೆಗತಿಯಲ್ಲಿ ಗಣತಿ

| Published : Sep 24 2025, 01:00 AM IST

ಸಾರಾಂಶ

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗೊಂದಲ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗೊಂದಲ ಮುಂದುವರೆದಿದ್ದು, ಎರಡನೇ ದಿನವಾದ ಮಂಗಳವಾರ ಸಂಜೆ 6ರ ವೇಳೆಗೆ 18,487 ಕುಟುಂಬಗಳ 71,004 ಮಂದಿಯ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ.

ತೀವ್ರ ವಿರೋಧ, ಗೊಂದಲ, ಸಮೀಕ್ಷೆಗೆ ತಡೆ ಕೋರಿ ಹಲವರು ನ್ಯಾಯಾಲಯದ ಮೊರೆ ಹೋಗಿರುವ ನಡುವೆಯೇ ಸೋಮವಾರ ಶುರುವಾದ ಸಮೀಕ್ಷೆಯಲ್ಲಿ ಮೊದಲ ದಿನ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆಯಷ್ಟೇ ನಡೆಸಲಾಗಿತ್ತು. ಎರಡನೇ ದಿನವೂ ಮಧ್ಯಾಹ್ನದವರೆಗೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲೇ ಅಧಿಕಾರಿಗಳು, ಗಣತಿ ಸಿಬ್ಬಂದಿ ಮುಳುಗಿದ್ದರು.

ಜತೆಗೆ ಸರ್ವರ್‌ ಸಮಸ್ಯೆ, ನೆಟ್‌ವರ್ಕ್‌ ಸಮಸ್ಯೆ, ಆ್ಯಪ್‌ ಡೌನ್‌ಲೋಡ್‌ ಸಮಸ್ಯೆ, ಕ್ರ್ಯಾಶ್ ಆಗುವುದು. ಒಟಿಪಿ ಸಮಸ್ಯೆ ಸೇರಿ ಗಣತಿದಾರರು ಹಲವು ಸಮಸ್ಯೆಗಳನ್ನು ಎದುರಿಸಿದರು. ಹೀಗಾಗಿ ಎರಡನೇ ದಿನವೂ ಸಮೀಕ್ಷೆ ವೇಗ ಪಡೆದಿಲ್ಲ. ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಒಟ್ಟಾರೆ 21,252 ಕುಟುಂಬಗಳ 89,491 ಮಂದಿಯ ಸಮೀಕ್ಷೆ ಮಾತ್ರ ಪೂರ್ಣಗೊಂಡಿತ್ತು. ಸಂಜೆ ವೇಳೆಯೂ ಗಣತಿದಾರರು ಸಮೀಕ್ಷೆಯಲ್ಲಿ ತೊಡಗಿದ್ದು, ಸ್ಪಷ್ಟ ಅಂಕಿ-ಅಂಶ ಇನ್ನಷ್ಟೇ ಬರಬೇಕಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ಗೊಂದಲ:

ಗಣತಿಗೆ 1.85 ಲಕ್ಷ ಶಿಕ್ಷಕರು, ಮೇಲ್ವಿಚಾರಕರು 2 ಲಕ್ಷ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ಗಣತಿದಾರರಿಗೆ 120 ರಿಂದ 150 ಮನೆಗಳ ಒಂದು ಬ್ಲಾಕ್‌ ಮಾತ್ರ ನಿಗದಿ ಮಾಡಲಾಗಿದೆ. ಒಂದು ದಿನಕ್ಕೆ ಕನಿಷ್ಠ 7 ರಿಂದ 8 ಮನೆಗಳ ಸಮೀಕ್ಷೆ ನಡೆಸಿದರೂ ಸುಲಭವಾಗಿ ನಿಗದಿತ 16 ದಿನದಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಭರವಸೆಯಲ್ಲಿ ಆಯೋಗ ಇದೆ.

ಆದರೆ, ಆಫ್‌ಲೈನ್‌ನಲ್ಲಿ ಸಮೀಕ್ಷೆಗೆ ಅವಕಾಶ ನೀಡಿಲ್ಲ. ಹೀಗಾಗಿ ಬಹುತೇಕ ಕಡೆ ನೆಟ್‌ವರ್ಕ್‌ ಇಲ್ಲದೆ ಗಣತಿದಾರರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲೂ ಪರದಾಡುವಂತಾಯಿತು. ಗಣತಿದಾರರಿಗೇ ಆ ಆ್ಯಪ್ ಬಗ್ಗೆ ಮಾಹಿತಿ ಇಲ್ಲ.

ಆ್ಯಪ್ ಡೌನ್‌ ಲೋಡ್ ಮಾಡಿದರೂ ಲಾಗ್‌ಇನ್ ಆಗಲು ಒಟಿಪಿ ಸಿಗುತ್ತಿರಲಿಲ್ಲ. ಕೆಲ ಕಡೆ ಗಣತಿದಾರರ ಮೊಬೈಲ್‌ ಕೈ ಕೊಡುವುದು, ಆ್ಯಪ್‌ ಗೆ ಅಗತ್ಯ ಸ್ಟೋರೇಜ್‌ ಇಲ್ಲದಿರುವುದು ಸೇರಿ ಹಲವು ತಾಂತ್ರಿಕ ಸಮಸ್ಯೆಗಳು ಮುಂದುವರೆದಿದ್ದವು. ಹೀಗಾಗಿ ಎರಡನೇ ದಿನವೂ ಸಮೀಕ್ಷೆ ಆಮೆಗತಿಯಲ್ಲೇ ಸಾಗಿದೆ.

-ಬಾಕ್ಸ್-

ಧರ್ಮದ ಕಾಲಂನಲ್ಲಿ ಗೊಂದಲ?

ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಧರ್ಮದ ಆಯ್ಕೆಯನ್ನು ಆಯೋಗದ ಪಟ್ಟಿಯಲ್ಲಿ ನೀಡಿಲ್ಲ. ಒಂದೊಮ್ಮೆ ಈ ಹೆಸರುಗಳನ್ನು ಧರ್ಮದ ಆಯ್ಕೆಯಲ್ಲಿ ಬರೆಸಿಕೊಳ್ಳುವವರು ಇತರೆ ಕಾಲಂನಲ್ಲಿ ಬರೆಸಬಹುದು ಎಂದು ಹೇಳಲಾಗಿತ್ತು. ಆದರೆ, ಜಾತಿಯಲ್ಲಿ ಮಾತ್ರ ವೀರಶೈವ ಲಿಂಗಾಯತ ಎಂದು ಬರೆಸಲು ಸಾಧ್ಯವಾಗುತ್ತಿದೆ. ಇತರೆ ಧರ್ಮದ ಕಾಲಂನಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

-ಕೋಟ್‌-

ಮಂಗಳವಾರವೂ ಆ್ಯಪ್‌ ಸಮಸ್ಯೆ, ಡೌನ್‌ಲೋಡ್ ಸಮಸ್ಯೆ, ಒಟಿಪಿ ಸಮಸ್ಯೆಯಂತಹ ತಾಂತ್ರಿಕ ತೊಡಕುಗಳು ಮುಂದುವರೆದಿವೆ. ಸಂಜೆ 6 ಗಂಟೆ ವೇಳೆಗೆ 18,487 ಕುಟುಂಬಗಳ ಸಮೀಕ್ಷೆ ಮಾತ್ರ ಆಗಿತ್ತು. ಹೀಗಾಗಿ ಇ-ಆಡಳಿತ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದು, ಬುಧವಾರದ ವೇಳೆಗೆ ಸಮಸ್ಯೆ ಬಗೆಹರಿಸಲಾಗುವುದು.

- ಕೆ.ಎ.ದಯಾನಂದ್‌, ಸದಸ್ಯ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ.

ಕೋಟ್..

ಸಾಮಾಜಿಕ, ಆರ್ಥಿಕ ಸಮೀಕ್ಷೆ ಶುರುವಾಗಿದ್ದು, ಉತ್ತಮವಾಗಿ ಸಮೀಕ್ಷೆ ನಡೆಯುತ್ತಿದೆ. ಕೆಲ ಗೊಂದಲ, ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಅವುಗಳನ್ನು ನಿಭಾಯಿಸಲು ಸದಸ್ಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದೇವೆ.

- ಮಧುಸೂದನ್‌ ನಾಯಕ್, ಅಧ್ಯಕ್ಷ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ.