ರಾಜೇಂದ್ರ ರಾವ್
ಕನ್ನಡಪ್ರಭ ವಾರ್ತೆ ಕೆ.ಆರ್.ನಗರಪ್ರತಿನಿತ್ಯ ಪಟ್ಟಣದಿಂದ ಮೈಸೂರಿಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯಿಂದ ನೀಡಲಾಗಿರುವ ಉಚಿತ ಬಸ್ ಪಾಸ್ ನಲ್ಲಿ ನಮೂದಿಸಲಾಗಿರುವ ಹತ್ತುವ ಮತ್ತು ಇಳಿಯುವ ಸ್ಥಳದ ಹೆಸರಿನಲ್ಲಿ ಗೊಂದಲವಾಗಿದ್ದು, ಪ್ರತಿದಿನ ವಿದ್ಯಾರ್ಥಿಗಳು ಮತ್ತು ಸಾರಿಗೆ ಸಂಸ್ಥೆ ಸಿಬ್ಬಂದಿ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಪಟ್ಟಣದಿಂದ ಮೈಸೂರಿಗೆ ದಿನನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗಾಗಿ ಸರ್ಕಾರ ಉಚಿತ ಬಸ್ ಪಾಸ್ ನೀಡಿದ್ದು, ಇದರಲ್ಲಿ ಇಲಾಖೆ ಮಾಡಿರುವ ಗೊಂದಲದಿಂದ ವಿದ್ಯಾರ್ಥಿಗಳು ಬಸ್ ಹತ್ತಿ ನಿರ್ವಾಹಕರೊಂದಿಗೆ ಜಗಳವಾಡಿಕೊಂಡು ಬಸ್ ನಿಂದ ಇಳಿದು ಮೈಸೂರು ಪಟ್ಟಣದಲ್ಲಿ ಕಾಲಿಗೆ ಬುದ್ಧಿ ಹೇಳಬೇಕಾದ ಪರಿಸ್ಥಿತಿ ಎದುರಾಗಿದೆ.ಉಚಿತ ಪಾಸ್‌ನಲ್ಲಿ ಕೆ.ಆರ್.ನಗರದಿಂದ ಮೈಸೂರಿಗೆ ಮಾರ್ಗ ಬದಲಾವಣೆ ಬಿಳಿಕೆರೆ ಎಂದು ನಮೂದಿಸಲಾಗಿದ್ದು, ಈ ಪಾಸ್ ಪಡೆದಿರುವ ವಿದ್ಯಾರ್ಥಿ ಮೈಸೂರು ಬಸ್ ನಿಲ್ದಾಣಕ್ಕೆ ಹೋಗಿ ಬಸ್ ಹತ್ತಿದರೆ ಬಸ್‌ನ ನಿರ್ವಾಹಕ ಬಸ್ ನಿಲ್ದಾಣದಿಂದ ನೀನು ಬಸ್ ಹತ್ತುವ ಆಗಿಲ್ಲ ಮೆಟ್ರೋಪೋಲ್‌ನಿಂದ ಹತ್ತಬೇಕು ಎಂದು ಬಸ್‌ನಿಂದ ಇಳಿಸಿದ ಇಂತಹ ಹತ್ತಾರು ಪ್ರಕರಣಗಳು ನಡೆದಿದ್ದು, ಇದರಿಂದ ಪ್ರತಿದಿನ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಸಿಬ್ಬಂದಿಯೊಂದಿಗೆ ಕಾದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮೈಸೂರುನಲ್ಲಿರುವ ಹಲವಾರು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಇಂತಹುದೆ ನಿಲ್ದಾಣದಲ್ಲಿ ಹತ್ತಬೇಕು, ಇಳಿಯಬೇಕೆಂಬ ನಿಯಮದೊಂದಿಗೆ ಪಾಸ್ ನೀಡಲಾಗಿದೆ. ಈ ನಡುವೆ ಹಲವಾರು ವಿದ್ಯಾರ್ಥಿಗಳಿಗೆ ಕೆ.ಆರ್. ನಗರದಿಂದ ಮೈಸೂರಿಗೆ ಎಂದು ನೀಡಲಾಗಿರುವ ಪಾಸ್ ಇದ್ದರೂ ಸಹ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ವಿದ್ಯಾರ್ಥಿಗಳು ಬಸ್ ಹತ್ತದೆ ಇರುವಂತಹ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಆಕ್ರೊಶ ವ್ಯಕ್ತಪಡಿಸುವ ಹಲವಾರು ವಿದ್ಯಾರ್ಥಿಗಳು ಇಂತಹುವುದೆ ಕಾಲೇಜಿನ ಬಳಿ ಇಳಿಯಬೇಕೆಂಬ ನಿಯಮವಿದ್ದರೂ ಗ್ರಾಮಾಂತರ ನಿಲ್ದಾಣದಿಂದ ಕಾಲೇಜು ದೂರವಿದ್ದರೆ ನಾವು ನಿಲ್ದಾಣಕ್ಕೆ ಬಂದು ಬಸ್ ಹತ್ತುವುದು ಹೇಗೆ ತಪ್ಪಾಗುತ್ತದೆ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ ಗೊಂದಲವನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಕೆ.ಆರ್.ನಗರದಿಂದ ಮೈಸೂರಿಗೆ ಎಂದು ಬಸ್ ಪಾಸ್ ನೀಡಿ ಮೈಸೂರಿನ ಗ್ರಾಮಾಂತರ ನಿಲ್ದಾಣದಿಂದ ಬಸ್ ಹತ್ತುವುದು ಬೇಡ ಎಂದು ಹೇಳುವುದು ಸರಿಯಲ್ಲ, ಆ ರೀತಿಯ ನಿಯಮವಿದ್ದರೆ ವಿದ್ಯಾರ್ಥಿಗಳ ಕಾಲೇಜಿನ ಸ್ಥಳ ನಮೂದಿಸಿಯೇ ಪಾಸ್ ನೀಡಿದಲ್ಲಿ ಗೊಂದಲ ನಿವಾರಣೆಯಾಗುತ್ತದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ.-ಪ್ರವೀಣ್, ಕೆ.ಆರ್. ನಗರ
ಈಗಾಗಲೆ ನೀಡಿರುವ ಪಾಸ್‌ನಲ್ಲಿ ಇಂತಹುವುದೆ ನಿಲ್ದಾಣದಲ್ಲಿ ಇಳಿಯಬೇಕು ಹತ್ತಬೇಕೆಂಬ ನಿಯಮವಿದೆ, ಆದರೆ ಬಸ್ ಪಾಸ್ ನೀಡುವ ಏಜೆನ್ಸಿಯವರು ಮಾಡಿರುವ ತಪ್ಪಿನಿಂದ ಈ ರೀತಿಯ ಗೊಂದಲದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಂಡು ಸರಿಪಡಿಸಲಾಗುವುದು.-ಕೆ.ಡಿ. ಕುಮಾರ್, ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ, ಕೆ.ಆರ್. ನಗರ