ಸಾರಾಂಶ
ವಿಜಯಪುರ: ಪುರಸಭಾಧ್ಯಕ್ಷೆ ಎಸ್.ಭವ್ಯಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ತಂದಿದ್ದ ಸ್ಥಾಯಿ ಸಮಿತಿ ರಚನೆ ವಿಚಾರ ಕುರಿತು ಚರ್ಚೆ ನಡೆಯದ ಕಾರಣ ಕೆರಳಿದ ಸದಸ್ಯರು ಸಭಾಂಗಣದಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕಳೆದ ಮೂರು ವರ್ಷಗಳಿಂದ ಪುರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಮಾಡಿಲ್ಲ. ಅಧ್ಯಕ್ಷೆ ಎಸ್.ಭವ್ಯಾ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚಿಸುವ ವಿಚಾರವನ್ನು ಅಜೆಂಡಾಗೆ ತಂದಿದ್ದರು. ಸ್ಥಾಯಿ ಸಮಿತಿ ರಚಿಸುವ ಕುರಿತು ಇರುವ ನಿಯಮಗಳ ಬಗ್ಗೆ ಕಂದಾಯ ಅಧಿಕಾರಿ ಚಂದ್ರು ಅವರು ಓದಿ ಸಭೆಗೆ ತಿಳಿಸಿದರು.ಈ ವಿಚಾರದ ಬಗ್ಗೆ ನಿಯಮದಂತೆ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ವಿಚಾರವಾಗಿ ಉಂಟಾದ ಗೊಂದಲದ ನಡುವೆ ಅಧ್ಯಕ್ಷೆ ಎಸ್.ಭವ್ಯಾ ಅವರು, ಈ ವಿಚಾರವನ್ನು ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಸಭೆಯಿಂದ ಹೊರನಡೆದರು.
ಈ ವೇಳೆ ಕೆರಳಿದ ಸದಸ್ಯರು ಅಧ್ಯಕ್ಷರ ವಿರುದ್ಧ ಸಭಾಂಗಣದಲ್ಲೆ ಪ್ರತಿಭಟಿಸಿದರು. ಉಳಿದ ಸದಸ್ಯರು ಸಭಾಂಗಣದಿಂದ ಹೊರ ನಡೆದರು.ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚಿಸುವ ವಿಚಾರವಾಗಿ ಅಜೆಂಡಾಗೆ ತಂದ ಮೇಲೆ ಅದನ್ನು ಕಾರ್ಯಗತಗೊಳಿಸುವ ಮೊದಲೆ ಅಧ್ಯಕ್ಷೆ, ಉಪಾಧ್ಯಕ್ಷೆ ಇಬ್ಬರೂ ಸಭೆಯಿಂದ ಹೊರನಡೆದಿರುವುದು ಸರ್ವಾಧಿಕಾರಿ ಧೋರಣೆ. ಸದಸ್ಯರಾಗುವುದಕ್ಕೆ ನಿಯಮದಂತೆ ನಾವೂ ಅರ್ಜಿ ಸಲ್ಲಿಸಿದ್ದೇವೆ. ನಮ್ಮ ಅರ್ಜಿಗೆ ಬೆಲೆಯಿಲ್ಲವೇ? ನಾವು ಸದಸ್ಯರಲ್ಲವೇ? ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮೊದಲು ಅಜೆಂಡಾಗೆ ತಂದಿರುವ ವಿಚಾರವನ್ನು ಚರ್ಚೆ ಮಾಡಲು ಯಾಕೆ ಅವಕಾಶ ನೀಡಲಿಲ್ಲ? ಸಭೆಯನ್ನು ಮುಕ್ತಾಯ ಮಾಡದೇ ಯಾಕೆ ಹೊರಗೆ ನಡೆದರು. ಈ ಬಗ್ಗೆ ನಮಗೆ ಮಾಹಿತಿ ಕೊಡಬೇಕು ಎಂದು ಪಟ್ಟುಹಿಡಿದಿದ್ದರು.
ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ, ಸ್ಥಾಯಿ ಸಮಿತಿ ರಚನೆಗೆ ಒಂದು ದಿನ ನಿಗದಿಪಡಿಸಿ, ಪ್ರಕ್ರಿಯೆ ಮುಗಿಸುವಂತೆ ಅಧ್ಯಕ್ಷರೊಂದಿಗೆ ಮಾತನಾಡೋಣ, ನೀವು ಪ್ರತಿಭಟನೆ ಮಾಡುವುದು ಬೇಡವೆಂದು ಮನವೊಲಿಸುವ ಪ್ರಯತ್ನ ಮಾಡಿದರು. ಸ್ವಲ್ಪ ಸಮಯದ ನಂತರ ಸಭಾಂಗಣದಿಂದ ಎಲ್ಲಾ ಸದಸ್ಯರು ಹೊರ ನಡೆದರು.ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾ ಮಹಬೂಬ್ ಪಾಷ, ಮುಖ್ಯಾಧಿಕಾರಿ ಜಿ.ಆರ್.ಸಂತೋಷ್, ಕಂದಾಯ ಅಧಿಕಾರಿ ಚಂದ್ರು, ಪ್ರಭಾರ ಕಂದಾಯ ನಿರೀಕ್ಷಕ ಅನಿಲ್, ಅಧಿಕಾರಿಗಳು ಹಾಜರಿದ್ದರು.