ಗದಗ ಜಿಲ್ಲೆಯ ಪ್ರವಾಸೋದ್ಯಮ ಹೋಲ್ಡಿಂಗ್ಸ್‌ ಗೊಂದಲ!

| Published : Sep 03 2025, 01:02 AM IST

ಸಾರಾಂಶ

ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಇರುವ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಹೋಲ್ಡಿಂಗ್ಸ್ (ಜಾಹೀರಾತು ಫಲಕಗಳು) ಅಳವಡಿಕೆ ಮತ್ತು ಅದರ ನಿರ್ವಹಣೆಯಲ್ಲಿ ಗದಗ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಇರುವ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಹೋಲ್ಡಿಂಗ್ಸ್ (ಜಾಹೀರಾತು ಫಲಕಗಳು) ಅಳವಡಿಕೆ ಮತ್ತು ಅದರ ನಿರ್ವಹಣೆಯಲ್ಲಿ ಗದಗ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

ಜಿಲ್ಲೆಯ ರೋಣ, ಗದಗ, ಶಿರಹಟ್ಟಿ, ಮುಂಡರಗಿ, ನರಗುಂದ, ಗಜೇಂದ್ರಗಡ, ಲಕ್ಷ್ಮೇಶ್ವರ ಹಾಗೂ ಹೋಬಳಿ ಮತ್ತು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಜಿಲ್ಲೆಗೆ ಪ್ರವೇಶ ಪಡೆಯುವ 70 ಮುಖ್ಯ ಸ್ಥಳದಲ್ಲಿ ಈ ಜಾಹೀರಾತು ಫಲಕ ಅಳವಡಿಸಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಹಾಗಾಗಿ 12 ಸ್ಥಳದಲ್ಲಿ ಈಗಾಗಲೇ ಜಾಹೀರಾತು ಫಲಕಗಳನ್ನು ನೆಟ್ಟು 6 ತಿಂಗಳು ಗತಿಸಿದೆ. ಆದರೆ ಯಾವುದೇ ಬೋರ್ಡ್‌ಗೂ ಇದುವರೆಗೂ ಪ್ರವಾಸೋದ್ಯಮದ ಜಾಹೀರಾತು ಹಾಕಿಲ್ಲ. ಬದಲಾಗಿ ಅವುಗಳನ್ನು ಯಾರ್ಯಾರೋ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಅಳವಡಿಸುವ ಉದ್ದೇಶ: ರಾಜ್ಯದಲ್ಲಿರುವ ಸುಂದರ ಮತ್ತು ವೈವಿಧ್ಯಮಯ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವುದು. ಐತಿಹಾಸಿಕ ತಾಣಗಳು, ನೈಸರ್ಗಿಕ ಸೌಂದರ್ಯ, ಸಾಹಸ ಕ್ರೀಡೆಗಳು, ಧಾರ್ಮಿಕ ಕೇಂದ್ರಗಳು ಮತ್ತು ಕರಾವಳಿ ಪ್ರದೇಶಗಳ ಬಗ್ಗೆ ಮಾಹಿತಿ ನೀಡಿ, ಅವುಗಳನ್ನು ಭೇಟಿ ಮಾಡಲು ಪ್ರೇರೇಪಿಸುವಂತೆ ಮಾಡುವುದು ಫಲಕ ಅಳವಡಿಕೆಯ ಹಿಂದಿನ ಉದ್ದೇಶವಾಗಿದೆ. ಪ್ರವಾಸೋದ್ಯಮವು ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತದೆ. ಜಾಹೀರಾತು ಫಲಕಗಳ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಹೋಟೆಲ್, ರೆಸ್ಟೋರೆಂಟ್‌, ಸ್ಥಳೀಯ ವ್ಯಾಪಾರ ಮತ್ತು ಸಾರಿಗೆ ವ್ಯವಸ್ಥೆಗಳಿಗೆ ಉತ್ತೇಜನ ನೀಡುವುದು ಪ್ರಮುಖ ಉದ್ದೇಶವಾಗಿದೆ.

ಜಾಹೀರಾತು ಫಲಕಗಳಿಂದ ಇತರೆಡೆಗಳಿಂದ ಬರುವ ಪ್ರವಾಸಿಗರಿಗೆ ಮಾಹಿತಿ ದೊರೆಯುತ್ತದೆ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಸಹಾಯವಾಗುತ್ತದೆ. ಪ್ರವಾಸೋದ್ಯಮ ಹೆಚ್ಚಿದಂತೆ, ಸ್ಥಳೀಯವಾಗಿ ಅನೇಕ ಹೊಸ ಉದ್ಯೋಗಗಳು, ಆರ್ಥಿಕ ವ್ಯವಹಾರ ಸೃಷ್ಟಿಯಾಗುತ್ತವೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಗೈಡ್‌ಗಳಂತಹ ಸೇವಾ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ.

ಮಾಹಿತಿಯೇ ಇಲ್ಲ: ಸದ್ಯಕ್ಕೆ ಜಿಲ್ಲೆಯಾದ್ಯಂತ ಅಳವಡಿಕೆಯಾಗಿರುವ ಜಾಹೀರಾತು ಫಲಕಗಳ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಮಾಹಿತಿಯೇ ಇಲ್ಲ, ಇದಕ್ಕಾಗಿ ನೀಡಿರುವ ಅನುದಾನ, ಖರ್ಚು ವೆಚ್ಚ, ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ, ಬಾಕಿ ಉಳಿದಿರುವ ಕಾಮಗಾರಿ ಹೀಗೆ ಈ ಸಂಪೂರ್ಣ ಯೋಜನೆಯ ಮಾಹಿತಿ ಗದಗನಲ್ಲಿ ಲಭ್ಯವೇ ಇಲ್ಲ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಸಾರ್ವಜನಿಕರಿಗೆ ಪ್ರವಾಸೋದ್ಯಮ ಮಾಹಿತಿ ನೀಡಲು ಅಳವಡಿಸಲಾಗಿರುವ ಹೋಲ್ಡಿಂಗ್ಸಗಳ ಮೇಲೆ ಜಿಲ್ಲಾ ಕಾಂಗ್ರೆಸ್ ಸಮಾವೇಶದ ಬ್ಯಾನರ್ ಗಳನ್ನು ಅಳವಡಿಸಿದ್ದಾರೆ. ಆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸುಮ್ಮನ್ನೇ ಇರುವುದು ಯಾವ ಕಾರಣಕ್ಕೆ?, ಈ ರೀತಿ ಬಳಕೆ ಮಾಡಿಕೊಳ್ಳಲು ಸರ್ಕಾರಿ ನಿಯಮಗಳಲ್ಲಿ ಅವಕಾಶವಿದೆಯೇ ? ಪ್ರವಾಸೋದ್ಯಮ ಅಧಿಕಾರಿಗಳು ಉತ್ತರಿಸಲಿ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಹೇಳಿದರು.

ಜಾಹೀರಾತು ಫಲಕಗಳ ಅನುಷ್ಠಾನ ಮತ್ತು ನಿರ್ವಹಣೆ ಕೇಂದ್ರ ಕಚೇರಿಯಿಂದಲೇ ನಡೆಯುತ್ತದೆ. ಯಾವ ಯಾವ ಸ್ಥಳದಲ್ಲಿ ಹಾಕಬಹುದು ಎನ್ನುವುದಷ್ಟೇ ಇಲ್ಲಿಂದ ಸೂಚನೆ ಮಾಡಲಾಗುತ್ತದೆ. ಹಾಗಾಗಿ ಹೆಚ್ಚಿನ ಮಾಹಿತಿ ನಮ್ಮ ಬಳಿ ಇಲ್ಲ ಪ್ರವಾಸೋದ್ಯಮ ಅಧಿಕಾರಿ ಕೊಟ್ರೇಶ ವಿಭೂತಿ ಹೇಳಿದರು.