ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರ ಒತ್ತಾಸೆಯಂತೆ ಸಭೆ ನಡೆಸಲಾಗಿದೆ. ಸಭೆಗೆ ಬೇಕಾದವರಿಗಷ್ಟೇ ಮಾಹಿತಿ ನೀಡಲಾಗಿದೆ ಎನ್ನುವ ಗಂಭೀರ ಆರೋಪಗಳು ಕೂಡಾ ಸಭೆಯ ಪೂರ್ವದಲ್ಲಿಯೇ ಕೇಳಿ ಬಂದವು.
ಗದಗ: ಜಿಲ್ಲೆಯ ಅತ್ಯುತ್ಕೃಷ್ಟವಾದ ತುಂಗಭದ್ರಾ ನದಿ ಪಾತ್ರದಲ್ಲಿರುವ ಮರಳು ಹರಾಜು ಪ್ರಕ್ರಿಯೆಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಚಾಲನೆ ನೀಡಿದ್ದು, ಅದಕ್ಕಾಗಿ ಸೋಮವಾರ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪ್ರೀ ಬಿಡ್ಡಿಂಗ್ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿದ್ದ ಕೆಲವೇ ಕೆಲವು ಮರಳು ಗುತ್ತಿಗೆದಾರರು ಪಾಲ್ಗೊಂಡಿದ್ದು ಹಲವು ಸಂಶಯಕ್ಕೆ ಕಾರಣವಾಗಿದೆ. ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಮುಂಡರಗಿ ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಲಭ್ಯವಿರುವ ಹೇರಳವಾದ ಮರಳನ್ನು ಹರಾಜು ಮಾಡಲಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಮರಳು ಬ್ಲಾಕ್ ಹರಾಜು ಪ್ರಕ್ರಿಯೆ, ಅಲ್ಲಿ ನಡೆದಿರುವ ಅಕ್ರಮದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದ ಹಿನ್ನೆಲೆ ತುಂಗಭದ್ರಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆ ಸ್ಥಗಿತಗೊಂಡಿತ್ತು. ಸ್ಥಗಿತಗೊಂಡಿದ್ದ ಮರಳು ಗಣಿಗಾರಿಕೆಯನ್ನು ಮರಳಿ ಪ್ರಾರಂಭಿಸುವುದೋ ಈ ಸಭೆಯ ಉದ್ದೇಶವಾಗಿದೆ.
ಜಿಲ್ಲೆಯಲ್ಲಿ ಒಟ್ಟು 19 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಹರಾಜು ಮಾಡಲು ಕ್ರಮ ಕೈಗೊಂಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಭಾಗದಲ್ಲಿನ ಮರಳು ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಅದನ್ನು ಪುನರ್ ಸ್ಥಾಪಿಸುವುದು ಮತ್ತು ಸರ್ಕಾರಕ್ಕೆ ಬರಬೇಕಾದ ರಾಜಸ್ವ ಪಡೆಯಲು ಗಣಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಆದರೆ ಸಭೆಗೆ ಮಾಹಿತಿ ನೀಡಲು ಬಂದ ಅಧಿಕಾರಿಗಳೇ ಹಲವಾರು ವಿಷಯದಲ್ಲಿ ಗೊಂದಲದಲ್ಲಿದ್ದ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿದ್ದವರು ಕೂಡಾ ಗೊಂದಲದಲ್ಲಿದ್ದು, ಗೊಣಗುತ್ತಲೇ ಹೊರನಡೆದರು.ಮಾಹಿತಿಯೇ ಇಲ್ಲ:
ಬಿಡ್ಡಿಂಗನಲ್ಲಿ ಮರಳು ಗುತ್ತಿಗೆದಾರರಿಗೆ ಇರಬೇಕಾದ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರೀ ಬಿಡ್ಡಿಂಗ್ ಹೆಸರಿನಲ್ಲಿ ಸಭೆ ಕರೆದಿದ್ದಾರೆ. ಆದರೆ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರ ಒತ್ತಾಸೆಯಂತೆ ಸಭೆ ನಡೆಸಲಾಗಿದೆ. ಸಭೆಗೆ ಬೇಕಾದವರಿಗಷ್ಟೇ ಮಾಹಿತಿ ನೀಡಲಾಗಿದೆ ಎನ್ನುವ ಗಂಭೀರ ಆರೋಪಗಳು ಕೂಡಾ ಸಭೆಯ ಪೂರ್ವದಲ್ಲಿಯೇ ಕೇಳಿ ಬಂದವು. ಈ ಹಿಂದೆ 19 ಬ್ಲಾಕ್‌ಗಳಲ್ಲಿ ನಡೆದಿರುವ ಅಕ್ರಮ ಮರಳು ದಂಧೆಯ ವಿಷಯ ನ್ಯಾಯಾಲಯದಲ್ಲಿ ಸುದೀರ್ಘವಾಗಿ ವಿಚಾರಣೆಯಾಗಿದೆ. ಅಂದು ಮರಳು ಗುತ್ತಿಗೆ ಪಡೆದ ಗುತ್ತಿಗೆದಾರರು ಸರ್ಕಾರಕ್ಕೆ ₹10 ಕೋಟಿಯಿಂದ ₹40 ಕೋಟಿವರೆಗೂ ದಂಡ ಭರಿಸುವಂತೆ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿದೆ. ಇದರಿಂದಾಗಿ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ತುಂಗಭದ್ರಾ ನದಿ ಪಾತ್ರದಲ್ಲಿನ ಮರಳು ಗಣಿಗಾರಿಕೆ, ಸೋಮವಾರದ ಗಣಿ ಅಧಿಕಾರಿಗಳ ಸಭೆಯಿಂದಾಗಿ ಮತ್ತೆ ಪ್ರಾರಂಭವಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದ್ದು, ಆರಂಭದಲ್ಲಿಯೇ ಗಣಿ ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದು, ಮುಂದೆ ಇನ್ನೇಗೋ ಎನ್ನುವ ಚರ್ಚೆ ಜಿಲ್ಲಾದ್ಯಂತ ಆಗುತ್ತಿದೆ. ಪೊಲೀಸ್ ಠಾಣೆಯನ್ನೇ ಸುಟ್ಟಿದ್ದರು... ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ಮರಳಿಗೆ ಬಂಗಾರದ ಬೆಲೆ ಇದ್ದು, ಇದರ ಮೇಲೆ ಎಲ್ಲರೂ ಹಿಡಿತ ಸಾಧಿಸುವ ತವಕದಲ್ಲಿದ್ದಾರೆ. ಈ ಹಿಂದೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವುದರ ಹಿಂದೆಯೂ ಇದೇ ಮರಳು ಮಾಫಿಯಾದ ಕರಿನೆರಳು ಇತ್ತು ಎನ್ನುವುದು ಕೂಡಾ ಜಗಜ್ಜಾಹೀರಾಗಿದೆ. ಮತ್ತೆ ಮರಳು ದಂಧೆ ಪ್ರಾರಂಭವಾದಲ್ಲಿ ಈಗ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವ ಆತಂಕ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಮುಂಡರಗಿ ತಾಲೂಕು ಜನರಲ್ಲಿ ಕಾಡುತ್ತಿದೆ. ಮಾಧ್ಯಮದವರಿಗೆ ಅವಕಾಶವಿಲ್ಲ...ಸೋಮವಾರದ ಸಭೆಗೆ ಮಾಧ್ಯಮಗಳಿಗೆ ಯಾವುದೇ ರೀತಿಯ ಅವಕಾಶವಿರಲಿಲ್ಲ. ಮಾಧ್ಯಮಗಳನ್ನು ದೂರವಿಟ್ಟು ಸಭೆ ನಡೆಸಿರುವ ಅಧಿಕಾರಿಗಳನ್ನು ಈ ವಿಷಯವಾಗಿ ಕೇಳಿದರೂ ಅವರು ಪ್ರತಿಕ್ರಿಯೆ ಕೂಡಾ ನೀಡುತ್ತಿಲ್ಲ ಎನ್ನುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.