ಹಾನಗಲ್ಲ ಪಟ್ಟಣದಲ್ಲಿರುವ ಒಂದೂವರೆ ಶತಮಾನ ಕಂಡ ಶಾಸಕರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಮನ್ವಯವಿಲ್ಲದೆ ಗೊಂದಲಕ್ಕೀಡಾಗಿದ್ದ ಶಾಲಾ ವಾತಾವರಣವನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ತಹಸೀಲ್ದಾರ್ ಎಸ್. ರೇಣುಕಾ ಸುಖಾಂತ್ಯಗೊಳಿಸಿದ್ದಾರೆ.
ಹಾನಗಲ್ಲ: ಪಟ್ಟಣದಲ್ಲಿರುವ ಒಂದೂವರೆ ಶತಮಾನ ಕಂಡ ಶಾಸಕರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಮನ್ವಯವಿಲ್ಲದೆ ಗೊಂದಲಕ್ಕೀಡಾಗಿದ್ದ ಶಾಲಾ ವಾತಾವರಣವನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ತಹಸೀಲ್ದಾರ್ ಎಸ್. ರೇಣುಕಾ ಸುಖಾಂತ್ಯಗೊಳಿಸಿದ್ದಾರೆ.
ಮಂಗಳವಾರ ಸಂಜೆ ಶಾಸಕರ ಮಾದರಿ ಶಾಲೆಗೆ ಭೇಟಿ ನೀಡಿದ ಅವರು, ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಶಾಲೆಯಲ್ಲಿ ಕಲಿಕಾ ವಾತಾವರಣಕ್ಕೆ ಆತಂಕ ಮಾಡುವ ಯಾವುದೇ ಚಟುವಟಿಕೆ ಶಾಲೆಯಲ್ಲಿ ನಡೆಯಕೂಡದು. ಶಾಲಾಭಿವೃದ್ಧಿಗೆ ಬಂದ ಅನುದಾನವನ್ನು ವಿಳಂಬವಿಲ್ಲದೆ ಶಾಲಾಭಿವೃದ್ಧಿಗೇ ಬಳಸಬೇಕು. ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಿ, ಅನುಮೋದನೆ ಪಡೆದು, ನಿಯಮಾನುಸಾರ ಅಭಿವೃದ್ಧಿ ಕಾರ್ಯಗಳನ್ನು ವಿಳಂಬಲ್ಲದೆ ಕೈಗೊಳ್ಳಬೇಕು. ಶೈಕ್ಷಣಿಕ ವಿಷಯಗಳಲ್ಲಿ ಲೋಪಗಳಿದ್ದರೆ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯೋಪಾಧ್ಯಾಯರು ಪರಿಶೀಲಿಸಿ ಅನಿವಾರ್ಯವಾದರೆ ಶಿಕ್ಷಕರ ಮೇಲೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.ಶಾಲಾ ಆವರಣದಲ್ಲಿ ಹಾಗೂ ಪಾಠದ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿಗಳಲ್ಲಿ ಅನಗತ್ಯವಾಗಿ ಯಾರೂ ಫೋಟೋ ಹಾಗೂ ವಿಡಿಯೋ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಮೇಲಧಿಕಾರಿಗಳ ಸೂಚನೆ ಮೇರೆಗೆ ಪಾಠ-ಪ್ರವಚನ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಸ್ವತಃ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿಯೇ ಚಿತ್ರೀಕರಿಸಬೇಕು. ಶಾಲೆಯಲ್ಲಿ ಕೆಲಸ ಮಾಡಿದ ಅತಿಥಿ ಶಿಕ್ಷಕರಿಗೆ ಕೂಡಲೇ ಬಾಕಿ ಇರುವ 7 ತಿಂಗಳ ಗೌರವಧನ ನೀಡಬೇಕು ಎಂದು ಹೇಳಿದರು.
ಒಂದೆರಡು ದಿನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಶಿಕ್ಷಕರು, ಮುಖ್ಯೋಪಾಧ್ಯಾಯರು, ಶಾಲಾಭಿವೃದ್ಧಿ ಸಮಿತಿ ನಡುವೆ ಸಮನ್ವಯ ಇರಲಿ. ನಿಮ್ಮ ಸಮಸ್ಯೆಗಳಿದ್ದರೆ ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ, ಬೀದಿ ರಂಪ ಮಾಡುವುದು ಬೇಡ. ಅನಿವಾರ್ಯವಾದರೆ ನನ್ನ ಗಮನಕ್ಕೆ ವಿಷಯ ತಂದರೆ ನಾನೇ ಖುದ್ದಾಗಿ ನಿಮ್ಮ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇನೆ. ವಿನಾಕಾರಣ ಬಡಿದಾಡಿಕೊಂಡು ಶಾಲಾ ವಾತಾವರಣಕ್ಕೆ ಧಕ್ಕೆ ತರಬೇಡಿ ಎಂದು ಕಟ್ಟಪ್ಪಣೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಇದ್ದರು.ಸಮಸ್ಯೆ ಸುಖಾಂತ್ಯ:ಅಲ್ಲದೆ ತಹಸೀಲ್ದಾರ್ ಎಸ್. ರೇಣುಕಾ, ಬುಧವಾರ ಬೆಳಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾನಗಲ್ಲಿನ ಶಾಸಕರ ಮಾದರಿ ಶಾಲೆ ಇಡೀ ತಾಲೂಕಿಗೆ ಮಾದರಿಯಾಗಬೇಕಾಗಿದ್ದು, ಶಾಲೆಯಲ್ಲಿ ಒಳ್ಳೆಯ ವಾತಾವರಣಕ್ಕೆ ನಾನೇ ಖುದ್ದು ಪರಿಶೀಲನೆ ನಡೆಸಿ, ಶಾಲೆಗೆ ಭೇಟಿ ನೀಡಿ ಅಲ್ಲಿನ ಎಲ್ಲ ಸಮಸ್ಯೆಗಳನ್ನು ತಿಳಿಗೊಳಿಸುವ ಭರವಸೆ ನೀಡಿದ್ದರು. ಅಲ್ಲಿನ ವಾತಾವರಣ ಈಗ ತಿಳಿಯಾಗಿದೆ. ಎಲ್ಲರೂ ಶಾಲೆಯ ಫಲಿತಾಂಶಕ್ಕೆ ಒತ್ತು ನೀಡಿದ್ದಾರೆ. ಇನ್ನು ಅಲ್ಲಿ ಯಾವುದೇ ಸಮಸ್ಯೆಯಾಗದಂತೆ ಗಮನ ಹರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಇಲ್ಲಿನ ಸಮಸ್ಯೆಗಳೆಲ್ಲ ಸುಖಾಂತ್ಯವಾಗಿವೆ ಎಂದರು.
ಈ ನಡುವೆ ಶಾಲೆಯಲ್ಲಿ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಸ್ಟ್‌ಬಿನ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.