ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಕುರಿತು ‘ಕನ್ನಡಪ್ರಭ’ ಪ್ರಕಟಿಸಿದ ವಿಶೇಷ ವರದಿ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಪಂದಿಸಿದ್ದು, ಸಮಸ್ಯೆಯ ಪರಿಶೀಲನೆಗೆ ಮುಂದಾಗಿದೆ.ಕೆಎಸ್ಆರ್‌ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕರು ಕುಶಾಲನಗರದ ಬಸ್ ನಿಯಂತ್ರಕ ಅಶೋಕ್ ಅವರನ್ನು ವಾಸ್ತವಿಕ ಸಮಸ್ಯೆ ಅರಿಯಲು ಸುಂಟಿಕೊಪ್ಪದಲ್ಲಿ ಬುಧವಾರ ನಿಯೋಜಿಸಿ ಮಾಹಿತಿ ಸಂಗ್ರಹಿಸಿದರು.ಸುಂಟಿಕೊಪ್ಪ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಮಡಿಕೇರಿ ಹಾಗೂ ಕುಶಾಲನಗರ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಸೇರಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ 7ರಿಂದ 10 ಗಂಟೆ ವರೆಗೆ ಈ ಭಾಗದಲ್ಲಿ ಸಂಚರಿಸುವ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಕೆಎಸ್ಆರ್‌ಟಿಸಿಯ ಎಲ್ಲ ಬಸ್‌ಗಳಲ್ಲಿ ಸಿಕ್ಕಾಪಟ್ಟೆ ಜನದಟ್ಟಣ ಇರುತ್ತದೆ. ಎರಡು ಬಸ್‌ನಲ್ಲಿ ಹೋಗವಷ್ಟು ಪ್ರಯಾಣಿಕರು ಒಂದೇ ಬಸ್ಸಿನಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಸಂಚರಿಸುತ್ತಾರೆ. ಸುಂಟಿಕೊಪ್ಪದಲ್ಲಿ ಬಸ್ ನಿಲುಗಡೆ ಹಾಗೂ ಈ ಭಾಗದವರಿಗೆ ಬಸ್ಸಿನಲ್ಲಿ ನೇತಾಡಿ ಸಂಚರಿಸುವುದು ಕಷ್ಟವಾಗುತ್ತಿದೆ. ಮಡಿಕೇರಿ ಭಾಗಕ್ಕೆ ತೆರಳುವ ಕಾಲೇಜು ವಿದ್ಯಾರ್ಥಿಗಳಿಗೆ 10 ಗಂಟೆಯವರೆಗೂ ಬಸ್ ದೊರೆಯದೆ ವಾರದ 3-4 ದಿನಗಳು ಪಾಠ, ಪ್ರವಚನ ಕಳೆದುಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ‘ಬಸ್ ಸೌಲಭ್ಯ ಇಲ್ಲದೆ ಶಿಕ್ಷಣಕ್ಕೆ ಕುತ್ತು ಹಾಜರಾತಿ, ಪಾಠಪ್ರವಚನಕ್ಕೆ ತೊಂದರೆ’ ಶೀರ್ಷಿಕೆಯಲ್ಲಿ ಮಂಗಳವಾರ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು.ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಕ ಅಶೋಕ್ ಬುಧವಾರ ಬೆಳಗ್ಗೆ 7ರಿಂದ 10.30ರ ತನಕ ಸುಂಟಿಕೊಪ್ಪ ಬಸ್ ನಿಲ್ದಾಣದಲ್ಲಿ ಹಾಜರಿದ್ದು ಸಮಸ್ಯೆ ಪರಿಶೀಲಿಸಿದರು. ಸುಂಟಿಕೊಪ್ಪ ಮಾರ್ಗವಾಗಿ ಅಂದಾಜು ಸುಮಾರು 40ಕ್ಕೂ ಹೆಚ್ಚು ರಾಜ್ಯ ಸಾರಿಗೆ ಸಂಸ್ಥೆಯ ಹೊರ ಜಿಲ್ಲೆಯ ಬಸ್‌ಗಳು ಸಂಚರಿಸುತ್ತಿವೆ. ಕುಶಾಲನಗರದಿಂದ ಮಡಿಕೇರಿ ಭಾಗಕ್ಕೆ ಆಗಮಿಸುವ ಹಾಸನ ಹಾಗೂ ಭಾಗದ ಬಸುಗಳೆಲ್ಲಾವೂ ಪ್ರಯಾಣಿಕರಿಂದ ತುಂಬಿ ಸಂಚರಿಸುತ್ತಿರುವುದನ್ನು ಗಮನಿಸಿದ ಅಶೋಕ್ ಜಿಪಿಎಸ್ ಆಧರಿತ ಫೋಟೋಗಳನ್ನು ಸೆರೆಹಿಡಿದು ಮೇಲಾಧಿಕಾರಿಗಳಿಗೆ ಕಳುಹಿಸಿದರು.
ಪೂರ್ವಾಹ್ನ 10 .30 ರವರೆಗೂ ಸಂಚರಿಸಿದ ಎಲ್ಲ ಬಸ್‌ಗಳೂ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ದೃಶ್ಯ ಕಂಡುಬಂತು..............................
ಸಂಬಂಧಿಸಿದ ಮಡಿಕೇರಿ ಡಿಪೋ ವ್ಯವಸ್ಥಾಪಕರು ಹಾಗೂ ಶಾಸಕರು ಸಮಸ್ಯೆಯ ಗಂಭೀರತೆ ಮನಗಂಡು ಸಮಸ್ಯೆ ಪರಿಶೀಲನೆಗೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಆದಷ್ಟು ಶೀಘ್ರ ಈ ಸಮಸ್ಯೆ ನಿವಾರಣೆ ಆಗಬೇಕು.-ಶರೀಫ್, ಆಟೋರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷ.
................ಮಡಿಕೇರಿ ಡಿಪ್ಪೋ ವ್ಯವಸ್ಥಾಪಕರು ಹಾಗೂ ಶಾಸಕರು ಸಮಸ್ಯೆಯ ಗಂಭೀರತೆ ಮನಗಂಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ಸೇವೆ ಆರಂಭಿಸುವ ಮೂಲಕ ಮಕ್ಕಳ ಮುಂದಿನ ದಿಸೆಯಲ್ಲಿ ಕ್ರಮಕೈಗೊಳ್ಳಲಿ.
-ಶರೀಫ್ (ಅಣ್ಣಾ) ಎಸ್‌ಡಿಟಿಯು ಜಿಲ್ಲಾಧ್ಯಕ್ಷ..........................
ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಹೆರೂರು, ಕಲ್ಲೂರು, 7ನೇ ಹೊಸಕೋಟೆ, ಸುಂಟಿಕೊಪ್ಪ, ಗರಗಂದೂರು, ಹರದೂರು, ಮತ್ತಿಕಾಡು, ಭೂತನಕಾಡು ಭಾಗಗಳಲ್ಲಿ ಒಂದೆಡೆ ಕಾಡಾನೆ ಹಾವಳಿ ಇದೆ. ಇದರ ನಡುವೆಯೂ ಮಕ್ಕಳು ಶಿಕ್ಷಣಕ್ಕಾಗಿ ಸುಂಟಿಕೊಪ್ಪಕ್ಕೆ ಆಗಮಿಸಿ ನಂತರ ಕೆಎಸ್ಆರ್‌ಟಿಸಿ ಬಸ್‌ಗಳ ಮೂಲಕ ಮಡಿಕೇರಿ, ಕುಶಾಲನಗರಗಳಿಗೆ ತೆರಳುತ್ತಾರೆ. ಮಕ್ಕಳ ಸಮಸ್ಯೆ ಅರಿತು ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಲಿ.-ಕೆ.ಎ.ಲತೀಫ್, ಸುಂಟಿಕೊಪ್ಪ.