ಸಾರಾಂಶ
ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಿಸಿ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ, ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೆ. 21, 22ರಂದು ಆಯೋಜಿಸಲಾಗಿದೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಭಿನಂದನೆ ಸಮಿತಿ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಡಾ. ಗುಡಸಿ ಕವಿವಿ 17ನೇ ಕುಲಪತಿಗಳಾಗಿ ನಾಲ್ಕು ವರ್ಷ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಿದೆ, ಉತ್ತಮ ಆಡಳಿತ ನಡೆಸಿದ್ದಾರೆ. ಅವರು ವಿವಿ ಆಡಳಿತ ಚುಕ್ಕಾಣಿ ಹಿಡಿದಾಗ ಕೊರೋನಾ ತಾಂಡವ ಹೆಚ್ಚಿತ್ತು. ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ವಿವಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಭೌತಿಕ ಕೆಲಸದ ಜತೆಗೆ ಎಲ್ಲ ವಿಭಾಗಗಳ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ತಿಳಿಸಿದರು.
ನ್ಯಾಕ್ ಎ-ಗ್ರೇಡ್ ಮಾನ್ಯತೆ ಉಳಿಸುವ ಜತೆಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಅಭಿವೃದ್ಧಿ, ವಿವಿಯಲ್ಲಿ ''''''''ಅರಿವೇ ಗುರು'''''''' ಪ್ರಶಸ್ತಿ ಸ್ಥಾಪನೆ, ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಗೆ ಒತ್ತು ನೀಡಿ ವಿವಿ ಸರ್ವಾಂಗೀಣ ಅಭಿವೃದ್ಧಿಗೆ ದುಡಿದ್ದಾಗಿ ಹೇಳಿದರು.ಸೆ. 21ರಂದು ಬೆಳಗ್ಗೆ 10ಕ್ಕೆ ಕವಿವಿ ಗೋಲ್ಡನ್ ಜ್ಯುಬ್ಲಿ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ದೆಹಲಿಯ ವಿಜ್ಞಾನ-ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ. ಟಿ. ರಾಮಸ್ವಾಮಿ ಉದ್ಘಾಟಿಸುವರು. ಪ್ರಾಧ್ಯಾಪಕ ಡಾ. ತೇಜರಾಜ್ ಅಮ್ಮಿನಬಾವಿ ಅಧ್ಯಕ್ಷತೆ ವಹಿಸಲಿದ್ದು, ಕುಲಪತಿ ಡಾ. ಕೆ.ಬಿ. ಗುಡಸಿ ಪಾಲ್ಗೊಳ್ಳಲಿದ್ದಾರೆ. ನಂತರದ ಗೋಷ್ಠಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬದಲಾವಣೆ ಬಗ್ಗೆ ಡಾ. ವಿ.ಕೆ. ಅತ್ರೆ ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಸೆ. 22ರ ಬೆಳಗ್ಗೆ 10.30ಕ್ಕೆ ತೋಂಟದ ಡಾ. ಸಿದ್ಧರಾಮ ಶ್ರೀ, ಮರೇಗುದ್ದಿ ನಿರುಪಾದೀಶ ಶ್ರೀ ಸಾನ್ನಿಧ್ಯದಲ್ಲಿ ಡಾ. ಕೆ.ಬಿ. ಗುಡಿಸಿ ಅವರಿಗೆ ಅಭಿನಂದನೆ ಹಾಗೂ ''''''''ಘನಮನಸಂಪನ್ನರು'''''''' ಗ್ರಂಥ ಲೋಕಾರ್ಪಣೆ ನಡೆಯಲಿದೆ. ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿ ಜಿಲ್ಲೆಯ ಜನಪ್ರತಿನಿಧಿಗಳು, ಸ್ನೇಹಿತರು, ಹಿತೇಷಿಗಳು ಪಾಲ್ಗೊಳ್ಳುವುದಾಗಿಯೂ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಂಜಯಕುಮಾರ ಮಾಲಗತ್ತಿ, ಪ್ರಾಧ್ಯಾಪಕ ಡಾ. ಜೆ.ಎಂ. ಚಂದುನವರ, ಡಾ. ಪ್ರಭಾಕರ ಕಾಂಬಳೆ ಇದ್ದರು.