ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಲವತ್ತ ನಾಲ್ಕನೇ ವಯಸ್ಸಿಗೆ ಎಪ್ಪತ್ತೈದು ಬಾರಿ ರಕ್ತದಾನ ಮಾಡಿರುವವರು ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್. ಯಾರು ಯಾವುದೇ ಕ್ಷಣ ರಕ್ತ ಬೇಕೆಂದರೂ ತಕ್ಷಣವೇ ಸ್ಪಂದಿಸುವ ಮಾನವೀಯ ಹೃದಯವಂತ. ಸದಾ ಕಾಲ ಅಪಾಯದಲ್ಲಿರುವ ಜೀವ ಉಳಿಸಬೇಕೆಂಬ ಉತ್ಸಾಹದೊಂದಿಗೆ ಕ್ರಿಯಾಶೀಲವಾಗಿರುವ ಲಂಕೇಶ್ ಅವರಿಗೆ ಶನಿವಾರ (ಅ.೧೦) ನಗರದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.೧೯೯೫- ೯೬ರಲ್ಲಿ ಎಂ.ಸಿ.ಲಂಕೇಶ್ ಅವರ ತಂದೆ ಅನಾರೋಗ್ಯ ಸಮಸ್ಯೆ ಎದುರಾಗಿತ್ತು. ಆ ಸಮಯದಲ್ಲಿ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಅಲ್ಲಿ ಎಲ್ಲರೂ ರಕ್ತದಾನ ಮಾಡುತ್ತಿದ್ದರು. ಅಂದೇ ರಕ್ತದಾನದ ಮಹತ್ವ ಅರಿತ ಎಂ.ಸಿ.ಲಂಕೇಶ್ ಅವರು ರಕ್ತದಾನ ಮಾಡುವ ಸಂಕಲ್ಪ ಮಾಡಿದರು. ಪದವಿ ತರಗತಿ ಸೇರುತ್ತಿದ್ದಂತೆ ಮೊದಲ ಬಾರಿಗೆ ಎಸ್.ಡಿ.ಜಯರಾಂ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ಆನಂತರದಲ್ಲಿ ಸತತವಾಗಿ ರಕ್ತದಾನ ಮಾಡುತ್ತಲೇ ಬಂದರು.
ಆನಂತರದಲ್ಲಿ ನೆಲದನಿ ಬಳಗ ಎಂಬ ಸಂಸ್ಥೆಯಡಿ ಯುವಕರನ್ನೆಲ್ಲಾ ಒಗ್ಗೂಡಿಸಿಕೊಂಡು ರಕ್ತದಾನ ಶಿಬಿರ ಆಯೋಜಿಸಲು ಆರಂಭಿಸಿದರು. ವರ್ಷಕ್ಕೆ ಎರಡು, ನಾಲ್ಕು, ಐದು ಬಾರಿ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಿ ಅಪಾಯದಲ್ಲಿರುವ ಜೀವಗಳ ಉಳಿವಿಗೆ ನೆರವಾಗುವ ಕಾರ್ಯದಲ್ಲಿ ನಿರತರಾದರು. ಎಂ.ಸಿ.ಲಂಕೇಶ್ ತಮ್ಮ ಬಾಳ ಸಂಗಾತಿ ಸುನೀತಾ ಅವರೊಂದಿಗೆ ರಕ್ತದಾನ ಮಾಡುವ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನೊಂದ ಮನಗಳ ಜೊತೆ ನಮ್ಮ ಹೆಜ್ಜೆ ಎಂಬ ಸಂದೇಶವನ್ನು ಸಾರುವ ಮೂಲಕ ದಂಪತಿ ಹೊಸ ಜೀವನ ಆರಂಭಿಸಿದರು. ಮದುವೆ ವೇಳೆಗೆ ಲಂಕೇಶ್ ೩೫ ಬಾರಿ ರಕ್ತದಾನ ಮಾಡಿದ್ದರು.ಹದಿನೆಂಟನೇ ವಯಸ್ಸಿನಿಂದ ರಕ್ತದಾನ ಮಾಡುವುದಕ್ಕೆ ಶುರುಮಾಡಿದ ಎಂ.ಸಿ.ಲಂಕೇಶ್ ಕಳೆದ ೨೬ ವರ್ಷಗಳಲ್ಲಿ ೭೫ ಬಾರಿ ರಕ್ತದಾನ ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮಂಡ್ಯ, ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ರಕ್ತದಾನ ಮಾಡಿರುವ ಎಂ.ಸಿ.ಲಂಕೇಶ್ ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ರಕ್ತದಾನ ಮಾಡುವ ಮೂಲಕ ತಮ್ಮ ೭೫ನೇ ರಕ್ತದಾನವನ್ನು ಪೂರೈಸಿದ್ದಾರೆ.
ಎಂ.ಸಿ.ಲಂಕೇಶ್, ಎಸ್.ಎಸ್.ಕೋಮಲ್ ಕುಮಾರ್‌ಗೆ ಇಂದು ಅಭಿನಂದನೆ:ನೆಲದನಿ ಅಲಯನ್ಸ್ ಮತ್ತು ಕೌಶಲ್ಯ ಅಲಯನ್ಸ್ ಸಂಯುಕ್ತಾಶ್ರಯದಲ್ಲಿ ೭೫ ಬಾರಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮತ್ತು ವಿಕಲಚೇತನರು, ಹಿರಿಯ ನಾಗರಿಕರ ಸಬಲೀಕರಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ಇಲಾಖೆ ಅಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅವರಿಗೆ ಶನಿವಾರ (ಅ.೧೧) ಸಂಜೆ ೬ ಗಂಟೆಗೆ ನಗರದ ಹರ್ಡೀಕರ್ ಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಸೌತ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು ವಹಿಸುವರು. ಜಿಲ್ಲಾ ರಾಜ್ಯಪಾಲ ಮಾದೇಗೌಡ ಉದ್ಘಾಟಿಸುವರು. ಮಿಮ್ಸ್ ರಕ್ತನಿಧಿ ಕೇಂದ್ರದ ಮೊಹಮ್ಮದ್ ರಫಿ ಅಭಿನಂದಿಸುವರು. ಮುಖ್ಯ ಅತಿಥಿಗಳಾಗಿ ನೆಲದನಿ ಅಲಯನ್ಸ್ ಅಧ್ಯಕ್ಷೆ ಮಹಾಲಕ್ಷ್ಮೀ ಕೋಮಲ್‌ಕುಮಾರ್, ಕೆ.ಆರ್.ಶಶಿಧರ್, ಕೆ.ಎಸ್.ಚಂದ್ರಶೇಖರ್, ವಿ.ಎಸ್.ನಾಗರಾಜು, ಆರ್.ಮಹೇಶ್ ಭಾಗವಹಿಸುವರು.