ಸಾರಾಂಶ
ಹುಬ್ಬಳ್ಳಿ:
ಶಶಿ ಸಾಲಿ...ಈ ನಾಲ್ಕಕ್ಷರ ಒಂದರ್ಥದಲ್ಲಿ ಧಾರವಾಡದ ಹೊಸ ನಾಲ್ಕು ತಂತಿಗಳಿದ್ದಂತೆ. ಇವು ಛಾಯಾಚಿತ್ರ ಕಲೆಯಲ್ಲಿ ಅರಳಿದ ತಂತಿಗಳು. ಪ್ರತಿ ಚಿತ್ರದಲ್ಲೂ ಸಾವಿರ ಪದಗಳ ನಿನಾದ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ಹಂಬಲ. ಅವರವರ ಭಾವಕ್ಕೆ ಝೇಂಕಾರ, ಓಂಕಾರ, ಪರಮಾನಂದ ಪ್ರಾಪ್ತಿ ಮಾಡುವ ಚಿತ್ತ ಚಿತ್ತಾರದ ಪೋಟೋಗಳವು. ಅದು ಶಶಿಯ ಧ್ಯಾನಸ್ಥ ಸಾಧನೆಯ ಫಲ.
ತಮ್ಮ ಅದ್ವಿತೀಯ ಛಾಯಾಚಿತ್ರ ಕಲಾ ಸಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಜತೆಗೆ ತಾಯ್ನೆಲ ಧಾರವಾಡದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿರುವ ಸುಪ್ರಿಸಿದ್ಧ ಕಲಾವಿದ, ಸೃಜನಶೀಲ ಛಾಯಾಚಿತ್ರಕಾರ ಶಶಿ ಸಾಲಿ ಅವರಿಗೆ ನಾಳೆ (ಭಾನುವಾರ) ಧಾರವಾಡದ ಮಿತ್ರರೆಲ್ಲ ಸೇರಿ ಅಭಿನಂದನ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಗಣ್ಯರು, ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಬಹುಮುಖ ಕಲಾಸಾಧಕ:
ಶಶಿ ಸಾಲಿ ಅವರದು ಬಹುಮುಖ ವ್ಯಕ್ತಿತ್ವ: ಬಹುಮುಖ ಕಲಾಸಾಧನೆ. ಅವರೊಬ್ಬ ಪ್ರತಿಭಾವಂತ ವಿದ್ಯಾರ್ಥಿ. ಓರ್ವ ತಜ್ಞ ಕಲಾ ಶಿಕ್ಷಕ, ಒಬ್ಬ ಪ್ರಬುದ್ಧ ಛಾಯಾಚಿತ್ರಕಲಾ ಸಂಪನ್ಮೂಲ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ವಿಶೇಷ ಆಹ್ವಾನದ ಮೇರೆಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾ ಕಾರಗಾರ, ಕಲಾಶಿಬಿರಗಳಲ್ಲಿ ವಿಷಯ ತಜ್ಞರಾಗಿ ಭಾಗವಹಿಸಿ ಬೋಧಿಸಿದ್ದಾರೆ; ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ: ಪ್ರಾತ್ಯಕ್ಷಿಕೆಗಳ ಮೂಲಕ ತಮ್ಮ ನೂತನ ಶೋಧಗಳನ್ನು ಪ್ರಕಟಪಡಿಸಿದ್ದಾರೆ. ಧಾರವಾಡದ ರುಡೆಸ್ಟ್ ಸಂಸ್ಥೆಯ ಅಡಿಯಲ್ಲಿ ಫೋಟೋಗ್ರಫಿ ತರಬೇತಿ ವರ್ಗಗಳನ್ನು ಆರಂಭಿಸಿ. ಕಳೆದ ೨೦ ವರ್ಷಗಳಿಂದ ಬೋಧಿಸುತ್ತ ಬಂದಿದ್ದಾರೆ. ಇಲ್ಲಿ ತರಬೇತಿ ಪಡೆದ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೃತ್ತಿಪರರಾಗಿ ಜೀವನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎನಿಸಿದೆ.ವರ್ಣಚಿತ್ರ, ಮುಖಪುಟ ವಿನ್ಯಾಸ, ಸಾಕ್ಷ್ಯಚಿತ್ರ ನಿರ್ಮಾಣ, ಚಲನಚಿತ್ರ. ಸ್ಥಿರಛಾಯಾ ಚಿತ್ರೀಕರಣ. ಛಾಯಾಚಿತ್ರ ವಸ್ತು ಸಂಗ್ರಹಾಲಯ ವಿನ್ಯಾಸ-ಮೊದಲಾದ ವಿಭಿನ್ನ ಕಲಾಪ್ರಕಾರಗಳಲ್ಲಿಯೂ ಸಮಾನ ಆಸಕ್ತಿ- ಪರಿಣಿತಿ ತೋರಿ, ಆಯಾ ಕ್ಷೇತ್ರಗಳಲ್ಲಿ ಎದ್ದು ಕಾಣುವ ಸಾಧನೆ ಮಾಡಿದ್ದಾರೆ ಶಶಿ. ತಮ್ಮ ಕಲಾಕೃತಿಗಳನ್ನು ಅನೇಕ ಕಲಾಪ್ರದರ್ಶನಗಳಲ್ಲಿ ಪ್ರಸ್ತುತಪಡಿಸಿ ಅಪಾರ ಜನಮೆಚ್ಚುಗೆಯನ್ನು ಗಳಿಸಿದ್ದಾರೆ. ಇವರ ''''ಹಕ್ಕಿಗಳ ಇಂಚರ. ಎಂಬ ೧೨೦ ವಿಧದ ಪಕ್ಷಿಗಳ ಛಾಯಾಚಿತ್ರ ಲಂಡನ್ನಿನಲ್ಲಿ ಪ್ರದರ್ಶನಗೊಂಡು ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ. ದೇಶ-ವಿದೇಶಗಳ ವನ್ಯಜೀವಿಗಳ ತಾಣಗಳಿಗೆ ಭೆಟ್ಟಿಯಿತ್ತು ಇವರು ತೆಗೆದ ಛಾಯಾಚಿತ್ರಗಳು ಅಪೂರ್ವ ದಾಖಲೆಗಳೆನಿಸಿವೆ.
ಶಶಿ ಸಾಲಿ ಅವರು ಒಬ್ಬ ಬರಹಗಾರರಾಗಿಯೂ ಸಾರಸ್ವತ ಲೋಕದ ಗಮನ ಸೆಳೆದಿದ್ದಾರೆ. ಛಾಯಾಚಿತ್ರ ಕುರಿತ ಕನ್ನಡ ಬರಹಗಾರರಲ್ಲಿ ಇವರಿಗೆ ವಿಶಿಷ್ಟ ಸ್ಥಾನ ಮೀಸಲಾಗಿದೆ. ಹಾಗೆಯೇ ಕಲಾವಿದರು. ಸಾಹಿತಿಗಳ ವ್ಯಕ್ತಿಚಿತ್ರ ರಚನೆಯಲ್ಲಿಯೂ ಇವರದು ಸಿದ್ಧಹಸ್ತ. ಇಂಗ್ಲಿಷ್ ಭಾಷೆಯಲ್ಲಿಯೂ ಈ ಕುರಿತು ಮೌಲಿಕ ಗ್ರಂಥಗಳನ್ನು ರಚಿಸಿ ಅಂತಾರಾಷ್ಟ್ರೀಯ ಓದುಗರ ಮನ್ನಣೆಗೂ ಪಾತ್ರರಾಗಿದ್ದಾರೆ.ಸಾಲಿ ಸ್ಟುಡಿಯೋ:
ಶಶಿ ಸಾಲಿ ಅವರು ವಿದ್ಯಾರ್ಥಿದಿಸೆಯಲ್ಲಿ ಆರಂಭಿಸಿದ ಫೋಟೋ ಸ್ಟುಡಿಯೋ ಮುಂದೆ ಅನೇಕ ಶಾಖೆಗಳಾಗಿ ಬೆಳೆಯುತ್ತದೆ. ಧಾರವಾಡದಲ್ಲಿ ಅದು ಒಂದು ಪ್ರತಿಷ್ಠಿತ ಉನ್ನತ ಮಟ್ಟದ ಜನಪ್ರಿಯ ಸ್ಟುಡಿಯೋ ಆಗಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ''''ಸಾಲಿ ಸ್ಟುಡಿಯೋ'''' ಎಂಬ ಹೆಸರು ಜನಜನಿತವಾಗುತ್ತದೆ.ಉತ್ತರ ಕರ್ನಾಟಕ ಛಾಯಾಗ್ರಾಹಕರ ಸಂಘ ಸ್ಥಾಪಿಸಿ ಅದರ ಪ್ರಥಮ ಕಾರಾಧ್ಯಕ್ಷರಾಗಿ ಕಾರಮಾಡಿದ್ದಾರೆ. ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಛಾಯಗ್ರಹಣ ಕಂಪನಿಗಳ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಅನೇಕ ಸಾಹಿತ್ಯಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಸದಸ್ಯರಾಗಿ ಸಕ್ರೀಯವಾಗಿ ಭಾಗವಹಿಸುತ್ತ ಬಂದಿದ್ದಾರೆ.ಸಾರ್ಥಕ ಸಾಂಸ್ಕೃತಿಕ ಬದುಕು ನಡೆಸಿದ ಶಶಿ ಸಾಲಿ ಅವರಿಗೆ ಈಗ ''''ನೆನಪು ಹರಿಗೋಲು'''' ಎಂಬ ಅರ್ಥಪೂರ್ಣ ಅಭಿನಂದನ ಗ್ರಂಥ ಅರ್ಪಿಸಿ ಗೌರವಿಸಲಾಗುತ್ತಿದೆ.