ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಲಕ್ಷ್ಮಣ ಸವದಿಯವರು ಕಾಂಗ್ರೆಸ್ ಪಕ್ಷಕ್ಕೆ ಜೈನ ಮುನಿ ವಿದ್ಯಾನಂದ ಮುನಿ ಮಹಾರಾಜರು ಕೊಟ್ಟ ಹಸ್ತ ಚಿಹ್ನೆಯನ್ನು ಸ್ಮರಿಸಿರುವುದು ಹಾಗೂ ಜೈನ ಸಮುದಾಯ ಋಣ ತೀರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿರುವುದಕ್ಕೆ ಜೈನ ಸಮುದಾಯದ ಪರವಾಗಿ ಅಭಿನಂದಿಸುತ್ತೇನೆ ಎಂದು ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ ಅರುಣಕುಮಾರ ಯಲಗುದ್ರಿ ಹೇಳಿದರು.ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ರಾಷ್ಟ್ರಸಂತ, ಜೈನಮುನಿ ವಿದ್ಯಾನಂದ ಮುನಿ ಮಹಾರಾಜರು ಕಾಂಗ್ರೆಸ್ ಪಕ್ಷಕ್ಕೆ ಆಕಳು ಮತ್ತು ಕರು ಚಿಹ್ನೆ ಮುಂದುವರೆಸುವುದು ಬೇಡ, ಹಸ್ತದ ಚಿಹ್ನೆಯನ್ನಿಟ್ಟುಕೊಂಡು ಪಕ್ಷ ಕಟ್ಟಿ ಒಳ್ಳೆಯದಾಗುತ್ತದೆ ಎಂದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರಿಗೆ ಸಲಹೆ ನೀಡಿದ್ದರು. ಹೀಗಾಗಿ ಜೈನಮುನಿಯವರ ಮಾತಿನಂತೆ ಇಂದಿರಾ ಗಾಂಧಿಯವರು ಆಕಳು ಮತ್ತು ಕರು ಚಿಹ್ನೆ ಬದಲಾಯಿಸಿ ಹಸ್ತ ಚಿಹ್ನೆ ಇಟ್ಟಿರುವುದರಿಂದ ದೇಶದ ಚುಕ್ಕಾಣೆಯನ್ನು ಅತೀ ದೀರ್ಘ ಕಾಲ ಹಿಡಿದಿರುವುದಕ್ಕೆ ಮುನಿಗಳ ಆಶೀರ್ವಾದವಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಚಿಹ್ನೆಯನ್ನು ನೀಡಿದ ಜೈನ ಸಮುದಾಯವನ್ನೇ ನಿರ್ಲಕ್ಷ್ಯ ಮಾಡಿದ್ದು ಖೇದಕರ ಎಂದು ಅಸಮಾಧಾನ ಹೊರಹಾಕಿದರು.
ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಸುಮಾರು ೨೫ ಸಾವಿರಕ್ಕೂ ಹೆಚ್ಚು ಜೈನ ಸಮಾಜದವರು ಸೇರಿರುವ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಜೈನ ಸಮಾಜಕ್ಕೆ ಬರುವ ಬಜೆಟ್‌ನಲ್ಲಿ ಅಭಿವೃದ್ಧಿ ನಿಗಮ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಹಾಗೆಯೇ ಸಿಎಂ ಸಿದ್ದರಾಮಯ್ಯನವರು ಕೂಡ ಆಶ್ವಾಸನೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಜೈನ ಸಮುದಾಯದ ಬೇಡಿಕೆಗಳನ್ನು ಈಡೇರಿಸದೇ ಇರುವುದನ್ನು ಶಾಸಕ ಸವದಿಯವರು ಸದನದಲ್ಲಿ ಸರ್ಕಾರಕ್ಕೆ ಮತ್ತೊಮ್ಮೆ ನೆನಪಿಸಿ ಜೈನ ಸಮುದಾಯದ ಋಣ ತೀರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿರುವುದನ್ನು ಜೈನ ಸಮಾಜ ಸ್ವಾಗತಿಸುತ್ತದೆ ಹಾಗೂ ಈ ಉಪಕಾರ ಸ್ಮರಣೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.ದಿಗಂಬರ ಜೈನ ಸಮಾಜದಲ್ಲಿ ಈಗಲೂ ಶೇ.೪೦ರಷ್ಟು ಜನ ಅತ್ಯಂತ ಕಡು ಬಡವರಿದ್ದು ಕೃಷಿ, ಕೂಲಿ ಮಾಡುತ್ತಾರೆ. ಆದರೂ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಮಾಡದೇ ಅನ್ಯಾಯವೆಸಗಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಸಮುದಾಯಗಳಿಗೆ ನಿಗಮ ಮಂಡಳಿ ಮಾಡಿದ್ದಾರೆ. ಜೈನ ಸಮಾಜವನ್ನು ನಿರ್ಲಕ್ಷಿಸಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರದಿದ್ದರೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುನಿಗಳು ಕೊಟ್ಟಿರುವ ಹಸ್ತ ಚಿಹ್ನೆಯ ಋಣಭಾರ ಕಾಂಗ್ರೆಸ್ ಸರ್ಕಾರದ ಮೇಲಿದ್ದು, ಆ ಋಣವನ್ನು ತೀರಿಸಲು ಸಿಎಂ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ಜೈನ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿಯನ್ನು ಆದಷ್ಟು ಶೀಘ್ರವಾಗಿ ಸ್ಥಾಪಿಸಬೇಕು. ರಾಜ್ಯದಲ್ಲಿ ಶೇ.94ರಷ್ಟು ಸುಶಿಕ್ಷಿತ ಜೈನ ಸಮುದಾಯದ ಜನರಿದ್ದಾರೆ. ಅಲ್ಪಸಂಖ್ಯಾತರಲ್ಲೇ ಅತೀ ಕಡಿಮೆ ಜನಸಂಖ್ಯೆವಿರುವ ಜೈನ ಸಮುದಾಯದ ವಿದ್ಯಾರ್ಥಿಗಳು ಸಸ್ಯಾಹಾರಿಗಳಾಗಿದ್ದು, ಸಾತ್ವಿಕ ಸಸ್ಯಾಹಾರಿಗಳಾಗಿರುವುದರಿಂದ ಈರುಳ್ಳಿ, ಬೆಳ್ಳುಳ್ಳಿ ಸೇವಿಸುವುದಿಲ್ಲ. ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳಿಗೆ ಬೆಲೆ ಕೊಡಬೇಕಾಗಿದ್ದು, ಜೈನ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಹಾಸ್ಟೇಲ್ ಸ್ಥಾಪಿಸಬೇಕು. ಅರುಣಕುಮಾರ ಯಲಗುದ್ರಿ, ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರು.;Resize=(128,128))
;Resize=(128,128))