ಸಾರಾಂಶ
ಶ್ರದ್ಧೆ ಮತ್ತು ಪರಿಶ್ರಮ ಎಲ್ಲಿರುತ್ತದೆಯೋ ಅಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಬಂದ ಅವಕಾಶಗಳನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಮುನ್ನಡೆದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ.
ಕನ್ನಡಪ್ರಭ ವಾರ್ತೆ ಕುದೂರು
ಗ್ರಾಮದ ಶ್ರೀದೇವಿ ಕುದೂರಮ್ಮ ಚಂಡೇವಾದ್ಯ ಮಹಿಳಾ ತಂಡದ ಸದಸ್ಯರು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ರಾಮನಗರ ಜಿಲ್ಲೆಗೆ ಹೆಸರು ತಂದಿರುವುದನ್ನು ಗ್ರಾಮಸ್ಥರು ಪ್ರಶಂಸಿಸಿ ಅಭಿನಂದಿಸಿದ್ದಾರೆ.ಶಾಸಕ ಬಾಲಕೃಷ್ಣ ಮಾತನಾಡಿ, ರಾಮನಗರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ವಿವಿಧ ರೀತಿಯ ಕಲಾಸಾಧಕರಿದ್ದಾರೆ. ಮಾಗಡಿಯ ಮಹಿಳಾ ತಂಡವೊಂದು ಅತ್ಯಂತ ಕಡಿಮೆ ಅವಧಿಯಲ್ಲಿ ಚಂಡೇವಾದ್ಯವನ್ನು ಅಭ್ಯಾಸ ಮಾಡಿ ನಾಡಿನ ವಿವಿಧ ಮೂಲೆಗಳಲ್ಲಿ ಮಾಗಡಿ ತಾಲೂಕು ಹಾಗೂ ರಾಮನಗರ ಜಿಲ್ಲೆಯ ಕೀರ್ತಿಯನ್ನು ಹರಡುತ್ತಿರುವುದು ಸಂತಸ ಮೂಡಿಸಿದೆ ಎಂದು ಹೇಳಿದರು.
ಶ್ರೀದೇವಿ ಲಕ್ಷ್ಮೀದೇವಿ ಕಲಾತಂಡದ ಕುಸುಮಾ ಗಂಗಾಧರ್ ಮಾತನಾಡಿ, ಶ್ರದ್ಧೆ ಮತ್ತು ಪರಿಶ್ರಮ ಎಲ್ಲಿರುತ್ತದೆಯೋ ಅಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಬಂದ ಅವಕಾಶಗಳನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಮುನ್ನಡೆದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ತಿಳಿಸಿದರು,ರೇಖಾ ಧನರಾಜ್ ಮಾತನಾಡಿ, ಮೈಸೂರು ದಸರಾ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮೂಲೆಯಿಂದ ಬಹುದೊಡ್ಡ ಕಲಾವಿದರ ತಂಡಗಳೇ ಬಂದಿರುತ್ತವೆ. ಅವರ ಮುಂದೆ ನಮ್ಮ ತಂಡ ಅತ್ಯಂತ ಉತ್ತಮವಾಗಿ ಪ್ರದರ್ಶನ ಮಾಡಿ ಮೆಚ್ಚುಗೆ ಪಡೆದಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.