ಸಾರಾಂಶ
ಅಡಕೆ ಬೆಳೆಗಾರ ಸಂಘದ ಅಧ್ಯಕ್ಷ ಕೆ.ಎಚ್. ಶಂಕರ್
ಕನ್ನಡಪ್ರಭ ವಾರ್ತೆ. ಕಡೂರುಭದ್ರಾ ಉಪಕಣಿವೆ ನೀರಾವರಿ ಯೋಜನೆಯ 3ನೇ ಹಂತದ ಕಾಮಗಾರಿಗೆ ₹407 ಕೋಟಿ ಅನುದಾನ ನೀಡಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಅನುದಾನ ಮೀಸಲಿಡಲು ಶ್ರಮಿಸಿದ ಶಾಸಕ ಕೆ.ಎಸ್. ಆನಂದ್ ಅವರಿಗೆ ಅಡಕೆ ಬೆಳೆಗಾರ ಸಂಘಗಳ ಪರವಾಗಿ ಅಭಿನಂದಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಕೆ.ಎಚ್. ಶಂಕರ್ ತಿಳಿಸಿದರು.
ಪಟ್ಟಣದ ಕೆ.ಎಲ್.ವಿ ವೃತ್ತದಲ್ಲಿ ಶನಿವಾರ ಅಡಕೆ ಬೆಳೆಗಾರ ಸಂಘದ ಸದಸ್ಯರು ಹಣ ಬಿಡುಗಡೆ ಮಾಡಿದ್ದಕ್ಕೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾ ಮಾತನಾಡಿದರು, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಕ್ಕೆ ಒಳಪಡುವ ಭದ್ರಾ ಉಪಕಣಿವೆ ನೀರಾವರಿ ಯೋಜನೆ ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು 3ನೇ ಹಂತದ ಕಾಮಗಾರಿ ವಿಳಂಬವಾಗದಂತೆ ಶಾಸಕ ಕೆ.ಎಸ್.ಆನಂದ್ ಮುಖ್ಯಮಂತ್ರಿಗೆ ಮಾಡಿದ ಮನವಿಗೆ ಈ ಭಾರಿ ಬಜೆಟ್‍ನಲ್ಲಿ ಕಡೂರು ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ ಹಣ ನೀಡಿರುವುದು ಸಂತಸ ತಂದಿದೆ. ಈ ಯೋಜನೆ ಪೂರ್ಣಗೊಂಡರೆ ತಾಲೂಕಿನ ಬಹುತೇಕ 197 ಕೆರೆಗಳಿಗೆ ನೀರು ಲಭ್ಯವಾಗಲಿದೆ ಎಂದರು.ಕಾಂಗ್ರೆಸ್ ಮುಖಂಡ ಕೆ.ಎಸ್. ತಿಪ್ಪೇಶ್ ಮಾತನಾಡಿ,ಅನೇಕ ವರ್ಷಗಳ ಹೋರಾಟ ಫಲ ನೀಡುವ ಮೂಲಕ ನಮ್ಮ ನಾಯಕರಾದ ಸಿದ್ದರಾಮಯ್ಯವರು ಬರಪೀಡಿತ ಕಡೂರು ತಾಲೂಕಿನ ನೀರಾವರಿಗೆ ಆದ್ಯತೆ ನೀಡುವ ಮುಖೇನ ಮತ್ತು ನಮ್ಮ ಶಾಸಕರಾದ ಕೆ.ಎಸ್.ಆನಂದ್ ರವರ ಪ್ರಯತ್ನದಿಂದ ಭದ್ರಾ ಉಪಕಣಿವೆ ಯೋಜನೆಯ 3 ನೇ ಹಂತದ ಕಾಮಗಾರಿಗೆ 407 ಕೋಟಿರೂ ಮೀಸಲಿಟ್ಟಿರುವುದಕ್ಕಾಗಿ ತಾಲೂಕಿನ ರೈತರ ಪರವಾಗಿ ನಮ್ಮ ಕಾಂಗ್ರೆಸ್ ಸರಕಾರವನ್ನು ಅಭಿನಂದಿಸುತ್ತೇವೆ ಎಂದರು.ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ ಮಾತನಾಡಿ, ಸಿದ್ದರಾಮಯ್ಯ ಕಡೂರು ಬಗ್ಗೆ ಅಭಿಮಾನ ಮತ್ತು ಕಾಳಜಿ ಇರುವ ಹಿನ್ನೆಲೆಯಲ್ಲಿ ಶಾಸಕರ ಒತ್ತಾಯದೊಂದಿಗೆ ಕ್ಷೇತ್ರದ ನೀರಾವರಿ ಯೋಜನೆ ಹಾಗೂ ಜವಳಿ ಪಾರ್ಕ್ ನಿರ್ಮಿಸಲು ಅನುದಾನವನ್ನು ಬಜೆಟ್‍ನಲ್ಲಿ ನೀಡಿರುವುದಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಅಡಕೆ ಬೆಳೆಗಾರ ಸಂಘದ ಪದಾಧಿಕಾರಿ ಕೆ.ಎಸ್.ತಿಪ್ಪೇಶ್ ಗಂಟೆಕುಮಾರ್, ಸುಭಾಷ್‍ನಗರ ಸುರೇಶ್, ನಲ್ಲೂರಿ ಮಂಜುನಾಥ್, ರಾಮಣ್ಣ, ಚೇತನ್, ಕೆ.ಎಸ್.ಕುಮಾರ್, ನಿಂಗಪ್ಪ, ಲಕ್ಕಪ್ಪ, ಸಿದ್ದಪ್ಪ, ಸುರೇಶ್, ಎಚ್.ರಮೇಶ್. ಮಂಜುನಾಥ್ ಹಾಗೂ ರೈತರು ಇದ್ದರು, 8ಕೆಕೆಡಿಯು 2. ಭದ್ರಾ ಉಪಕಣಿವೆ ನೀರಾವರಿ ಯೋಜನೆಯ 3ನೇ ಹಂತದ ಕಾಮಗಾರಿಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟ ಹಿನ್ನಲೆಯಲ್ಲಿ ಕಡೂರು ಪಟ್ಟಣದ ಕೆಎಲ್‍ವಿ ವೃತ್ತದಲ್ಲಿ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.