ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ನಾಗರೀಕ ಅಭಿನಂದನಾ ಸಮಿತಿ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜ.೨೬ರಂದು ಸಂಜೆ ೬ ಗಂಟೆಗೆ ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ದುಡಿದ ಸಚಿವರು, ಶಾಸಕರು ವಿವಿಧ ಸಮಿತಿಗಳ ಅಧ್ಯಕ್ಷರ ಅಭಿನಂದನಾ ಸಮಾರಂಭ ಮತ್ತು ರಸಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕರೂ ಆದ ಸಮಿತಿಯ ಪೋಷಕ ಜಿ.ಬಿ.ಶಿವಕುಮಾರ್ ತಿಳಿಸಿದರು.ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಜಿಲ್ಲೆಯ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ, ಸಂಚಾಲಕರಾಗಿದ್ದ ಡಾ.ಮೀರಾಶಿವಲಿಂಗಯ್ಯ ಹಾಗೂ ಶಾಸಕರು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ನಮ್ಮ ಜವಾಬ್ದಾರಿ ಮೆರೆಯುವ ಕಾರ್ಯಕ್ರಮ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ನಾಗರೀಕ ಅಭಿನಂದನಾ ಸಮಿತಿಯ ಅಧ್ಯಕ್ಷ ಎಚ್.ಬಿ.ರಾಮು ಮಾತನಾಡಿ, ಅಭಿನಂದನಾ ಸಮಾರಂಭ ಮತ್ತು ರಸಸಂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಮ್ಮೇಳನ ಯಶಸ್ಸಿಗೆ ಕಾರಣರಾದ ಜಿಲ್ಲೆಯ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ, ಶಾಸಕರು, ಜಿಲ್ಲಾಡಳಿತ ಮತ್ತು ಕಸಾಪ ಪ್ರಮುಖರನ್ನು ಸನ್ಮಾನಿಸುವರು ಎಂದರು.ಅಭಿನಂದನಾ ಕಾರ್ಯಕ್ರಮದ ನಂತರ ಖ್ಯಾತ ಗಾಯಕರಾದ ಹೇಮಂತ್, ಶಮಿತಾ ಮಲ್ನಾಡ್ ಮತ್ತು ಹರ್ಷ ತಂಡದಿಂದ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನಡೆಯುವ ಕಾರ್ಯಕ್ರಮಕ್ಕೆ ನಾಗರೀಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಮಹೇಶ್ ಜೋಶಿಗೆ ಕರೆ ಮೂಲಕ ಆಹ್ವಾನ:ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ಸಿ.ರಮೇಶ್ ಮಾತನಾಡಿ, ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ನಡವಳಿಕೆ ಬಗ್ಗೆ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿದ್ದು, ಸಮ್ಮೇಳನದ ಯಶಸ್ಸಿಗೆ ಅವರೂ ದುಡಿದಿರುವ ಕಾರಣ ಅವರನ್ನು ಸನ್ಮಾನಿಸಲಾಗುವುದು. ಆದರೆ, ಅವರಿಗೆ ಯಾವುದೇ ರೀತಿಯ ಆಹ್ವಾನ ಪತ್ರ ನೀಡಲಾಗುವುದಿಲ್ಲ. ಕರೆ ಮೂಲಕ ಆಹ್ವಾನಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಎಚ್.ಪಿ.ಶಶಿಕುಮಾರ್, ಉಪಾಧ್ಯಕ್ಷ ಕಂಬದಹಳ್ಳಿ ಪುಟ್ಟಸ್ವಾಮಿ, ಪ್ರಧಾನ ಸಂಚಾಲಕ ತಗ್ಗಹಳ್ಳಿ ವೆಂಕಟೇಶ್, ಖಜಾಂಚಿ ಸಿ.ತ್ಯಾಗರಾಜು, ಪ್ರಧಾನ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಪ್ರದೀಪ್‌ಕುಮಾರ್ ಇತರರಿದ್ದರು.