ಸಾರಾಂಶ
ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಅತಿ ಹೆಚ್ಚಿನ ಮತಗಳ ಹಂತರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ವಿಜಯ ಸಾಧಿಸಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರ ವಿಶ್ವಾಸ, ಅಭಿಮಾನಕ್ಕೆ ಗೌರವ ನೀಡಿ ಮತದಾರರ ಋಣ ತೀರಿಸಲು ಅ.21 ರಂದು ತಮ್ಮ ಪುತ್ರಿ ಟಿ.ಆರ್.ಸುಚಿತ್ರ, ಜಿ.ವರುಣರವರ ವಿವಾಹವನ್ನು ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಧಾಕರ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಮಾಡುವ ಮೂಲಕ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದಾರೆ.
ಶಾಸಕ ಪುತ್ರಿ ವಿವಾಹ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ನಗರದ ಎಲ್ಲಾ ವೃತ್ತಗಳಲ್ಲಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಸೇರಿದಂತೆ ಆಗಮಿಸುವ ಎಲ್ಲರಿಗೂ ಸ್ವಾಗತಕೋರುವ ಬ್ಯಾನರ್‌ಗಳು ರಾರಾಜಿಸುತ್ತವೆ. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ತಮ್ಮದೇಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರೂ ಶಾಸಕ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಇದ್ದಾರೆ.ವಿವಾಹ ಕಾರ್ಯಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಭೋಜನವೂ ಸೇರಿದಂತೆ ಯಾವುದೇ ಅವ್ಯವಸ್ಥೆಯಾಗದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಈಗಾಗಲೇ ಹಲವಾರು ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮದಿಂದಲೂ ವಿವಾಹ ಕಾರ್ಯಕ್ಕೆ ಆಗಮಿಸುವ ಬಸ್ ವ್ಯವಸ್ತೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೂ ವಿವಾಹದ ಆಹ್ವಾನದ ಪತ್ರಿಕೆಗಳನ್ನು ಕಳಿಸಿ ಎಲ್ಲರನ್ನೂ ಆಹ್ವಾನಿಸಿದ್ದಾರೆ.
ವಿಶೇಷವಾದ ಬೃಹತ್ ಜರ್ಮನ್ ಟೆಂಟ್ ನಿರ್ಮಾಣ : ವಿವಾಹ ನಡೆಯುವ ಮದುವೆ ಮಂಟಪವನ್ನು ಅದ್ಧೂರಿಯಾಗಿ ಸಿದ್ಧಪಡಿಸಲಾಗಿದೆ. ತಿರುಪತಿಯ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ ಹೋಲಿಕೆಯುಳ್ಳ ಆಕರ್ಷಣೆವಾದ ಮಂಟಪ ಸಿದ್ಧಪಡಿಸಿದ್ದು, ಮಂಟಪದ ಒಳಭಾಗದಲ್ಲಿ ಮಾಂಗಲ್ಯಧಾರಣೆಯಾಗುವ ಸ್ಥಳವೂ ಸಹ ದೇವಸ್ಥಾನದ ಆಕಾರದಲ್ಲೇ ಸಿದ್ಧವಾಗಿದೆ. ಮದುವೆಗೆ ಆಗಮಿಸುವ ವಿಐಪಿ, ವಿವಿಐಪಿಗಳು ನೇರವಾಗಿ ವಧುವರರನ್ನು ಆಶೀರ್ವದಿಸಿ ಮದುವೆ ಮಂಟಪದ ಹಿಂಭಾಗದಲ್ಲಿ ನಿರ್ಮಿಸಿರುವ ಊಟದ ಹಾಲ್‌ಗೆ ತೆರಳಬಹುದಾಗಿದೆ. ಸುಮಾರು ೩ ಸಾವಿರಕ್ಕೂ ಹೆಚ್ಚು ವಿಐಪಿಗಳು ಒಂದೇ ಬಾರಿ ಭೋಜನ ಮಾಡುವ ವ್ಯವಸ್ಥೆ ಮಾಡಲಾಗಿದೆ.ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಎರಡು ಜರ್ಮನ್ ಟೆಂಟ್ ನಿರ್ಮಿಸಿದ್ದು, ಒಂದರಲ್ಲಿ ಸುಮಾರು ೫ ಸಾವಿರದಂತೆ ಒಟ್ಟು ೧೦ ಸಾವಿರ ಜನರು ಊಟದಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕೆ ಹೊಂದಿಕೊಂಡಂತೆ ಹೆಚ್ಚುವರಿಯಾಗಿ ಎರಡು ಶೆಟ್ ನಿರ್ಮಿಸಿದ್ದು, ಅಲ್ಲೂ ಸಹ ಒಂದೇ ಹಂತದಲ್ಲಿ ೬ ಸಾವಿರ ಜನರು ಭಫೇ ಸ್ವೀಕರಿಸಬಹುದು.
ಚಳ್ಳಕೆರೆ ತಾಲ್ಲೂಕಿನಲ್ಲಿ ಈ ಹಿಂದೆ ಈ ಕ್ಷೇತ್ರದ ಮಾಜಿ ಸಚಿವ ತಿಪ್ಪೇಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ತಮ್ಮ ಪುತ್ರಿಯರ ವಿವಾಹವನ್ನು ಇದೇ ಸ್ಥಳದಲ್ಲಿ ಮಾಡಿದ್ದರು. ಈಗ ಹ್ಯಾಟ್ರಿಕ್ ಶಾಸಕರೂ ಸಹ ತಮ್ಮ ಪುತ್ರಿವಿವಾಹ ಇಲ್ಳೇ ಮಾಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.ಎಲ್ಲರೂ ಆಗಮಿಸಿ ವಧು-ವರರನ್ನು ಆಶೀರ್ವದಿಸಿ
ಮತದಾರರ ವಿಶ್ವಾಸ, ಅಭಿಮಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಮತದಾರರ ಎದುರೇ, ಸಮ್ಮುಖದಲ್ಲೇ ಅವರ ಆಶೀರ್ವಾದದಿಂದಲೇ ನನ್ನ ಪುತ್ರಿಯ ವಿವಾಹ ನಡೆಯಬೇಕೆಂಬ ಸಂಕಲ್ಪದಿಂದ ಇಲ್ಲಿಯೇ ವಿವಾಹ ಕಾರ್ಯ ಮಾಡುತ್ತಿದ್ದೇನೆ. ಕ್ಷೇತ್ರದ ಜನರನ್ನು ಈಗಾಗಲೇ ಆಹ್ವಾನಿಸಿದ್ದೇನೆ, ಎಲ್ಲಾ ಸಿದ್ಧತೆ ನಡೆದಿವೆ. ಎಲ್ಲರೂ ಆಗಮಿಸಿ ವಧು-ವರರನ್ನು ಆಶೀರ್ವದಿಸಿ ನಾವು ನೀಡುವ ಅತಿಥಿ ಸತ್ಕಾರವನ್ನು ಸ್ವೀಕರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದ್ದಾರೆ.