ಕೊಪ್ಪಳದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ: ಸಚಿವ ತಂಗಡಗಿ

| Published : Apr 26 2024, 12:53 AM IST / Updated: Apr 26 2024, 12:43 PM IST

ಕೊಪ್ಪಳದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಒಂದುವರೆ ಲಕ್ಷ ಮತಗಳಿಂದ ಗೆಲುವು ಸಾಧಿಸಲಿದ್ದಾರೆ.

 ಕನಕಗಿರಿ :  ಕೊಪ್ಪಳದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ. ನಮ್ಮ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಒಂದುವರೆ ಲಕ್ಷ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.

ಹುಲಿಹೈದರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರ ಮತಗಳಲ್ಲಿ ರಾಜಶೇಖರ ಸೋತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ್ ಗೆಲುವು ಯಾರಿಂದಲೂ ತಪ್ಪಿಸಲಾಗದು. ಬಿಜೆಪಿಯ ಸುಳ್ಳುಗಳಿಗೆ ಜನ ಬೇಸತ್ತು ಹೋಗಿದ್ದು, ಮೇ 7ರಂದು ಮತದಾರರು ಹಸ್ತದ ಗುರುತಿಗೆ ಮತದಾನ ಮಾಡುವ ಮೂಲಕ ತಕ್ಕಪಾಠ ಕಲಿಸುತ್ತಾರೆ ಎಂದರು.

ಮೋದಿಯವರು ಹೇಳಿದಂತೆ ನಡೆದುಕೊಂಡಿದ್ದಾರೆಯೇ? ಯುವಕರಿಗೆ ಉದ್ಯೋಗ ನೀಡಿದ್ದಾರಾ? ಇದ್ಯಾವುದು ಆಗಿಲ್ಲ. ಕೇವಲ ಭಾಷಣಕ್ಕೆ ಸೀಮಿತವಾಗಿದ್ದಾರೆ. ಆದರೆ ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಈಗಾಗಲೇ ಐದು ಗ್ಯಾರಂಟಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿನ ಗ್ಯಾರಂಟಿ ಜಾರಿಗೊಳಿಸುವುದಾಗಿ ತಿಳಿಸಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ನಿತ್ಯ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಈ ಚುನಾವಣೆಯಲ್ಲಿ ರಾಜಶೇಖರ ಗೆಲ್ಲುವುದು ಅಷ್ಟೇ ಸತ್ಯ. ಗಡ್ಕರಿಯಂತಹ ರಾಜಕಾರಣಿ ಅಪರೂಪ. ಅವರನ್ನು ನಾನೆಂದು ಮರೆಯಲ್ಲ. ಕೊಪ್ಪಳದ ಅಭಿವೃದ್ಧಿಗೆ ಗಡ್ಕರಿ ಕೊಡುಗೆ ಅಪಾರ ಎಂದು ನಿತಿನ್ ಗಡ್ಕರಿ ಅವರನ್ನು ನೆನೆದರು. ಸಂಸದರ ಮಾತು ಆಲಿಸಿದ ಸಚಿವ ತಂಗಡಗಿ ತಲೆ ಅಲ್ಲಾಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಮಾತನಾಡಿ, ನಾನು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸಲು ಸಿದ್ದರಾಮಯ್ಯನವರು ಅವಕಾಶ ನೀಡಿದ್ದಾರೆ. ಮತದಾರರು ಹಸ್ತದ ಗುರತಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಮುಖಂಡರಾದ ಹನುಮೇಶ ನಾಯಕ, ರಮೇಶ ನಾಯಕ, ರೆಡ್ಡಿ ಶ್ರೀನಿವಾಸ, ಸಿದ್ದಪ್ಪ ನಿರ್ಲೂಟಿ, ಗಂಗಾಧರಸ್ವಾಮಿ, ನಾಗಪ್ಪ ಹುಗ್ಗಿ, ರಾಮನಗೌಡ ಬುನ್ನಟ್ಟಿ, ಬಸವಂತಗೌಡ, ಜಿಪಂ ಮಾಜಿ ಸದಸ್ಯೆ ಶಾಂತಾ ನಾಯಕ, ಶರಣಪ್ಪ ಸೋಮಸಾಗರ ಇತರರು ಇದ್ದರು.

ಸಚಿವ ತಂಗಡಗಿ ಎಕೆ47:  ಪ್ರಚಾರ ಸಭೆ ಆರಂಭವಾಗುತ್ತಿದ್ದಂತೆ ಕುಷ್ಟಗಿಯ ಮಾಜಿ ಶಾಸಕ ಹಾಗೂ ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ ಮಾತು ಆರಂಭಿಸಿ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಮತಯಾಚಿಸಿದರು. ಬಳಿಕ ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಭಾಷಣದ ಕೊನೆಯಲ್ಲಿ ಬಿಜೆಪಿ ಹಾಗೂ ಮೋದಿಯವರ ಬಗ್ಗೆ ಎಕೆ 47 ಆಗಿರುವ ಜಿಲ್ಲಾ ಮಂತ್ರಿ ಮಾತನಾಡುತ್ತಾರೆ ಎಂದು ಶಿವರಾಜ ತಂಗಡಗಿಗೆ ಹೊಸ ಬಿರುದು ಕೊಟ್ಟರು.