ಕೈ 6 ಸದಸ್ಯರಿಗೂ ಉಪಾಧ್ಯಕ್ಷ ಸ್ಥಾನದ ಮೇಲಾಸೆ!

| Published : Aug 24 2024, 01:22 AM IST

ಸಾರಾಂಶ

ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಗೌಡ್ರ ಮಧು ಅಭ್ಯರ್ಥಿ ಆಗೋದು ಪಕ್ಕಾ.! ಆದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಾಂಗ್ರೆಸ್‌ನ 8 ಮಂದಿ ಸದಸ್ಯರಲ್ಲಿ 6 ಮಂದಿ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ಆಸೆ ಇಟ್ಟುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಗೌಡ್ರ ಮಧು ಅಭ್ಯರ್ಥಿ ಆಗೋದು ಪಕ್ಕಾ.! ಆದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಕಾಂಗ್ರೆಸ್‌ನ 8 ಮಂದಿ ಸದಸ್ಯರಲ್ಲಿ 6 ಮಂದಿ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ಆಸೆ ಇಟ್ಟುಕೊಂಡಿದ್ದಾರೆ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೂಚಿಸಿದವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸೋದು ಖಚಿತವಾಗಿದೆ. ಕಾಂಗ್ರೆಸ್‌ಗೆ ಎಸ್‌ಡಿಪಿಐ ಸದಸ್ಯ ಬೆಂಬಲ ನೀಡಲಿದ್ದು, ಅವರು ಕೂಡ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಪುರಸಭೆ 8 ಮಂದಿ ಕಾಂಗ್ರೆಸ್‌ ಸದಸ್ಯರಲ್ಲಿ ಬಿಸಿಎಂ (ಬಿ)ನ ಗೌಡ್ರ ಮಧು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ ಸದಸ್ಯೆ ಅನ್ನಪೂರ್ಣ ಮಾತ್ರ ನಾನು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೂಳಿದ ಪುರಸಭೆ ಸದಸ್ಯರಾದ ನಾಯಕ ಸಮಾಜದ ಆರ್.ಭಾಗ್ಯಲಕ್ಷ್ಮೀ, ಎನ್.ಕುಮಾರ್‌, ಶ್ರೀನಿವಾಸ್ (ಕಣ್ಣಪ್ಪ) ಉಪಾಧ್ಯಕ್ಷ ಸ್ಥಾನ ಬೇಕು ಎಂದಿದ್ದಾರೆ. ಕುರುಬ ಸಮಾಜದ ಎಲ್.ನಿರ್ಮಲ ಕೂಡ ಉಪಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವೆ ಎಂದಿದ್ದಾರೆ. ಪುರಸಭೆ ಹಿರಿಯ ಸದಸ್ಯರಾದ ಪರಿಶಿಷ್ಟ ಜಾತಿಯ ಅಣ್ಣಯ್ಯಸ್ವಾಮಿ ಕೂಡ ಉಪಾಧ್ಯಕ್ಷ ಸ್ಥಾನದ ಮೇಲೆ ಆಸೆ ಇಟ್ಟುಕೊಂಡಿದ್ದು, ನಾನು ಹಿರಿಯ ಸದಸ್ಯ ನನಗೊಂದು ಅವಕಾಶ ಕೊಟ್ಟರೆ ಸ್ಪರ್ಧಿಸುವೆ ಎಂದಿದ್ದಾರೆ.

ಮತ್ತೋರ್ವ ಹಿರಿಯ ಸದಸ್ಯ ಮಹಮದ್‌ ಇಲಿಯಾಸ್‌ ಉಪಾಧ್ಯಕ್ಷ ಸ್ಥಾನದ ಮೇಲೆ ಆಸೆ ಇದ್ದರೂ ತೋರ್ಪಡಿಸುವ ಗೋಜಿಗೆ ಹೋಗದೆ ಶಾಸಕರು ಮನಸ್ಸು ಮಾಡಿ ಉಪಾಧ್ಯಕ್ಷ ಸ್ಥಾನ ಕೊಟ್ಟರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್‌ ನ ಆರು ಮಂದಿ ಸದಸ್ಯರು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಶಾಸಕರು ಯಾರಿಗೆ ಗ್ರೀನ್‌ ಸಿಗ್ನಲ್‌ ನೀಡುತ್ತಾರೋ ಕಾದು ನೋಡಬೇಕಿದೆ.ಪುರಸಭೆಯ ಹಿರಿಯ ಸದಸ್ಯರಾದ ಅಣ್ಣಯ್ಯಸ್ವಾಮಿ, ಮಹಮದ್‌ ಇಲಿಯಾಸ್ ಉಪಾಧ್ಯಕ್ಷರಾಗಲಿ. ನನಗೆ ಕೊಟ್ಟರೂ ಸಂತೋಷ, ಕೊಡದಿದ್ದರೂ ಸಂತೋಷ, ಶಾಸಕರ ತೀರ್ಮಾನಕ್ಕೆ ನಾನು ಬದ್ಧ.

ಶ್ರೀನಿವಾಸ್ (ಕಣ್ಣಪ್ಪ) ಕಾಂಗ್ರೆಸ್‌ ಸದಸ್ಯಉಪಾಧ್ಯಕ್ಷ ಸ್ಥಾನದ ಮೇಲೆ ಎಸ್‌ಡಿಪಿಐ

ಸದಸ್ಯ ರಾಜಗೋಪಾಲ್‌ ಕಣ್ಣು!

ಪುರಸಭೆ ಅಧಿಕಾರ ಹಿಡಿಯಲು ಎಸ್‌ಡಿಪಿಐ ಸದಸ್ಯ ಎಚ್.ಆರ್.ರಾಜಗೋಪಾಲ್‌ ಬೆಂಬಲ ಬೇಕೇ ಬೇಕು! ಹಾಗಾಗಿ ಪುರಸಭೆ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಆದರೆ ಬಹಿರಂಗ ಪಡಿಸಿಲ್ಲ.!

ಕಾಂಗ್ರೆಸ್‌ ಅಧಿಕಾರ ಹಿಡಿಯಲು ನನ್ನ ಬೆಂಬಲವೂ ಬೇಕಿದೆ ಆದರೆ ಶಾಸಕರಾದ ಎಚ್.ಎಂ.ಗಣೇಶ್‌ ಪ್ರಸಾದ್‌ರ ಭರವಸೆಯಂತೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದೇನೆ ಎಂದು ಎಸ್‌ಡಿಪಿಐ ಸದಸ್ಯ ಎಚ್.ಆರ್.ರಾಜಗೋಪಾಲ್‌ ಹೇಳಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ, ನೀನು ನನ್ನ ಜೊತೆ ಇರು ಎಂದು ಶಾಸಕರು ಹೇಳಿದ್ದಾರೆ. ನಾನು ಬೆಂಬಲ ಕಾಂಗ್ರೆಸ್‌ಗೆ ನೀಡುವುದರಿಂದ ಉಪಾಧ್ಯಕ್ಷ ಸ್ಥಾನ ಕೊಟ್ಟರೆ ಕಾಂಗ್ರೆಸ್‌ಗೆ ಗೌರವ ಹೆಚ್ಚಾಗಲಿದ್ದು, ಶಾಸಕರು ಮನಸ್ಸು ಮಾಡಿ ನನಗೆ ಉಪಾಧ್ಯಕ್ಷ ಸ್ಥಾನ ಕೊಟ್ಟರೆ ಖಂಡಿತ ಜವಬ್ದಾರಿ ನಿಭಾಯಿಸುವೆ ಎಂದರು.