ಸಾರಾಂಶ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ರಹಮತ್ ಉಲ್ಲಾ ಅಸಾದಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಗೀತಾ ರಮೇಶ್ ಅವರನ್ನು ಸದಸ್ಯರು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಇಲ್ಲಿನ ಪಟ್ಟಣ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದು ರಹಮತ್ ಉಲ್ಲಾ ಅಸಾದಿ ಎರಡನೇ ಬಾರಿಗೆ ಅಧ್ಯಕ್ಷರಾಗಿ, ಗೀತಾ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.15 ಸದಸ್ಯ ಬಲದ ಪಪಂಯಲ್ಲಿ 9 ಮಂದಿ ಕಾಂಗ್ರೆಸ್ ಹಾಗೂ 6 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದು ಉಪಾಧ್ಯಕ್ಷ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿತ್ತು. ವಿಜೇತರಾದ ಅಭ್ಯರ್ಥಿಗಳು ತಲಾ 9 ಮತ ಪಡೆದಿದ್ದು ಪರಾಜಿತರಾದ ಬಿಜೆಪಿ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಜ್ಯೋತಿ ಗಣೇಶ ತಲಾ 6 ಮತಗಳನ್ನು ಗಳಿಸಿದ್ದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಜಕ್ಕನಗೌಡರ್ ಕಾರ್ಯನಿರ್ವಹಿಸಿದರು.ಕಾಂಗ್ರೆಸ್ ಸದಸ್ಯರ ಪ್ರತಿಭಟನೆ:
ನಿಗದಿತ ಪ್ರಕಟಣೆಯಂತೆ ಮಧ್ಯಾಹ್ನ ಒಂದು ಗಂಟೆಗೆ ನಡೆಯಬೇಕಿದ್ದ ಚುನಾವಣೆಯನ್ನು ಚುನಾವಣಾಧಿಕಾರಿ ಜಕ್ಕನಗೌಡರ್ ಇದ್ದಕ್ಕಿದ್ದಂತೆ ಒಂದೂವರೆ ಗಂಟೆ ಮುಂದೂಡುತ್ತಿದ್ದಂತೆ ಪ್ರತಿಭಟನೆಗಿಳಿದ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧಿಕ್ಕಾರ ಕೂಗಿದರು. ಅಷ್ಟರಲ್ಲಾಗಲೇ ಪಪಂಯಿಂದ ಹೊರಗೆ ಹೋಗಿದ್ದ ಬಿಜೆಪಿ ಸದಸ್ಯರನ್ನು ದೂರವಾಣಿ ಮೂಲಕ ಕರೆಸಿ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯ್ತು. ಪೂರ್ವ ನಿಗದಿಯಾಗಿದ್ದ ಸಮಯವನ್ನು ಜಕ್ಕನಗೌಡರ್ ಏಕೆ ಮುಂದೂಡಿದರು ಎಂಬುದು ತಿಳಿದು ಬಂದಿಲ್ಲ.ವಿಜೇತರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪಧಾಧಿಕಾರಿಗಳಾಗಿ ಚುನಾಯಿತರಾದವರು ಪಟ್ಟಣದ ಜನತೆ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಇದ್ದು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶುಭ ಹಾರೈಸಿದರು. ಅಧ್ಯಕ್ಷ –ಉಪಾಧ್ಯಕ್ಷರ ಕುರ್ಚಿಯಷ್ಟೆ ಬದಲಾವಣೆ:
ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ರಹಮತ್ ಉಲ್ಲಾ ಅಸಾದಿ ಈ ಬಾರಿ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಾಗಿದ್ದ ಗೀತಾ ರಮೇಶ್ ಈ ಬಾರಿ–ಉಪಾಧ್ಯಕ್ಷರಾಗಿದ್ದೊಂದೆ ಬದಲಾವಣೆ. ಆಪರೇಶನ್ ಕಮಲದ ಭಯದಿಂದ ಎಲ್ಲಾ 9 ಮಂದಿ ಕಾಂಗ್ರೆಸ್ ಸದಸ್ಯರನ್ನು ಕೊಪ್ಪ ತಾಲೂಕಿನ ಜಯಪುರದ ರೆಸಾರ್ಟಿನಲ್ಲಿ ಇರಿಸಲಾಗಿದ್ದು ವಿಪ್ ಕೂಡಾ ನೀಡಲಾಗಿತ್ತು.