ಕಾಂಗ್ರೆಸ್‌ ಪಕ್ಷ ಜನರ ಜೊತೆ ಸದಾ ನಿಲ್ಲುತ್ತೆ: ಹಾಲಪ್ಪ

| Published : Dec 29 2023, 01:31 AM IST

ಕಾಂಗ್ರೆಸ್‌ ಪಕ್ಷ ಜನರ ಜೊತೆ ಸದಾ ನಿಲ್ಲುತ್ತೆ: ಹಾಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ 138ನೇ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ತುಮಕೂರು

ಕಾಂಗ್ರೆಸ್ ಪಕ್ಷ ಸದಾ ಜನರ ಜೊತೆಗೆ ನಿಲ್ಲುತ್ತಾ ಬಂದಿದೆ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದರು.

ದೇಶದ ಪ್ರಜೆಗಳಿಗೆ ಅನ್ಯಾಯ, ತೊಂದರೆಯಾದಂತೆ ಸಂದರ್ಭದಲ್ಲಿ ಸ್ವಾತಂತ್ರ ಪೂರ್ವದಲ್ಲಾಗಿರಬಹುದು, ಇಲ್ಲವೇ ಸ್ವಾತಂತ್ರ ನಂತರದಲ್ಲಾಗಿರಬಹುದು. ಜನರ ಜೊತೆಗೆ ನಿಲ್ಲುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಎಂದರು.

2002 ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿಯಾದಾಗ ಅಧಿವೇಶನದಲ್ಲಿ ಮೂರು ದಿನಗಳ ಕಾಲ ಚರ್ಚೆ ನಡೆದು, ಜನತೆಗೆ ಸತ್ಯ ತಿಳಿಸುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಮಾಡಿತ್ತು. 2023 ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿಯಾಗಿರುವುದನ್ನು ಪ್ರಶ್ನಿಸಿದ 146 ಜನ ಸಂಸದರನ್ನು ಅಮಾನತ್ತು ಮಾಡಿ, ಇಡೀ ಪಾರ್ಲಿಮೆಂಟನ್ನೇ ಕತ್ತಲೆಯಲ್ಲಿ ಇಡಲಾಗಿದೆ. ಯಾವುದು ಸರಿ ಎಂಬುದನ್ನು ಜನರು ಜನತಾ ನ್ಯಾಯಾಲಯದ ತೀರ್ಪಿನಲ್ಲಿ ಪ್ರಚುರ ಪಡಿಸಬೇಕಿದೆ ಎಂದರು.

ಮಾಜಿ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, 1885 ರ ಡಿ. 28 ರಂದು ಬ್ರಿಟಿಷರಿಂದ ಸ್ವಾತಂತ್ರವನ್ನು ಪಡೆಯುವುದಕ್ಕಾಗಿ ಚಳವಳಿ ರೂಪದಲ್ಲಿ ಹುಟ್ಟಿಕೊಂಡ ಕಾಂಗ್ರೆಸ್ ಸಂಘಟನೆ, ಸ್ವಾತಂತ್ರ ನಂತರದಲ್ಲಿ ಒಂದು ಪಕ್ಷವಾಗಿ ಮುಂದುವರೆದಿದೆ. ಶಿಕ್ಷಣ. ಸಹಬಾಳ್ವೆಯನ್ನೇ ಗುರಿಯಾಗಿಟ್ಟುಕೊಂಡು ಇಂದಿಗೂ ತಾನು ನಂಬಿದ ಸಿದ್ಧಾಂತ ಮತ್ತು ತಾನು ಹಾಕಿಕೊಂಡಿರುವ ಗುರಿಯತ್ತ ಸಾಗಲು ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೊದಲು ಕಾಂಗ್ರೆಸ್ ಪಕ್ಷದವರು ಅರ್ಥ ಮಾಡಿಕೊಂಡು ಅದರಂತೆ ನಡೆಯಬೇಕಿದೆ. ಹೊಂದಾಣಿಕೆ ರಾಜಕಾರಣ ಬಿಡದ ಹೊರತು ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ. ಹಾಗಾಗಿ ನನ್ನನ್ನೂ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಬದ್ದವಾಗಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ ಎಂದರು. ಮುಂಬುರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೊಲೀಸಬೇಕೆಂದರೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.

ಕೆಪಿಪಿಸಿ ವಕ್ತಾರ ನಿಕೇತ್ ರಾಜ್ ಮಾರ್ಯ ಮಾತನಾಡಿ, ಸ್ವಾತಂತ್ರಕ್ಕೂ ಮುನ್ನ 526 ಸಣ್ಣ ಸಂಸ್ಥಾನಗಳಾಗಿದ್ದ ಭಾರತವನ್ನು ಒಗ್ಗೂಡಿಸಿ, ಇಲ್ಲಿನ ಜನರನ್ನು ದಾಸ್ಯದಿಂದ ಮುಕ್ತಗೊಳಿಸುವ ಉದ್ದೇಶದಿಂದ 27 ಜನ ವಿದ್ವಾಂಸರು ಸೇರಿ ಹುಟ್ಟು ಹಾಕಿದ ಸಂಘಟನೆ ಕಾಂಗ್ರೆಸ್, ಬಿಜೆಪಿಯವರು ಹೇಳುವಂತೆ ಎ.ಓ.ಹೂಮ್ ಅವರು ಕಾಂಗ್ರೆಸ್ ಪಕ್ಷದ ಸಂಸ್ಥಾಪಕರಲ್ಲ. ಮೊದಲ ಅಧ್ಯಕ್ಷರಷ್ಟೇ. ಇದು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿಯ ಭಕ್ತರ ತೋಳಿನ ಮೇಲಿರುವ ಚುಚ್ಚು ಮದ್ದಿನ ಗುರುತೇ ಹೇಳುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಅಧ್ಯಕ್ಷರ ಆಸೆಯಂತೆ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವನ್ನು ಬಹಳ ಶಿಸ್ತಿನಿಂದ ನಡೆದಿದೆ.ಅತಿ ದೊಡ್ಡ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ನಾವೆಲ್ಲರೂ ಮುಂದಿನ ದಿನಗಳಲ್ಲಿ ನಮಗೆ ಸವಾಲಾಗಿರುವ ಜಿ.ಪಂ., ತಾ.ಪಂ. ಹಾಗೂ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ಪ್ಲಕ್ಸ್, ಬ್ಯಾನರ್‌ಗಳಿಗೆ ಮಾತ್ರ ಮುಖಂಡರು ಸಿಮಿತವಾಗದೆ ಪಕ್ಷ ಕಟ್ಟಲು ಬಳಕೆ ಮಾಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಇಂದು ಎಐಸಿಸಿ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದು ಧರ್ಮದಲ್ಲಿನ ಅನಿಷ್ಠಗಳಿಂದ ಬೇಸತ್ತು ಬೌದ್ಧ ಧರ್ಮ ಸ್ವೀಕರಿಸಿದ್ದು ನಾಗಪುರದಲ್ಲಿ, ಹಾಗೆಯೇ ಇಂದಿನ ಅನಿಷ್ಠಗಳಿಗೆ ಕಾರಣವಾಗಿರುವ ಆರ್‌ಎಸ್ಎಸ್ ಕಚೇರಿ ಇರುವುದು ನಾಗಪುರದಲ್ಲಿದೆ. ಧರ್ಮ, ಜಾತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಬಿಜೆಪಿಯನ್ನು ತೊಲಗಿಸುವ ಕೆಲಸ ಅರಂಭವಾಗಿದೆ. ಇದೇ ಒಗ್ಗಟ್ಟನ್ನು ನಾವು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಂಡು ಹೊಗುವ ಮೂಲಕ ಪಕ್ಷವನ್ನು ಬಲಗೊಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್. ಷಪಿ ಅಹಮದ್,ಅಸ್ಲಾಂಪಾಷ, ಆರ್. ರಾಮಕೃಷ್ಣ, ಪಂಚಾರಕ್ಷಯ್ಯ,ನಾಗಮಣಿ ಅವರು ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದ ಕುರಿತು ಮಾತನಾಡಿದರು. ಈ ವೇಳೆ ಮುಖಂಡರಾದ ಸಿದ್ದಲಿಂಗೇಗೌಡ, ವಾಲೆಚಂದ್ರಯ್ಯ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸೈಯದ್ ಫಯಾಜ್, ನರಸಿಂಹಮೂರ್ತಿ, ಗಿರೀಶ್, ರಂಗಶಾಮಯ್ಯ, ನಾಗರಾಜು, ಶ್ರೀನಿವಾಸ್, ಕೆಂಪಣ್ಣ, ಶಿವಾಜಿ, ಗುರುಪ್ರಸಾದ್, ಸಂಜೀವ ಸುಂದರ್‌ ಕುಮಾರ್, ಮೆಹಬೂಬ್ ಪಾಷ, ಸುಜಾತ ಮತ್ತಿತರರು ಪಾಲ್ಗೊಂಡಿದ್ದರು.

ದೇಶದ ಜನರನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡುವ ಸಲುವಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷಕ್ಕೂ, ದೇಶದ ಅಲ್ಪಸಂಖ್ಯಾತರು, ಬಡವರು, ದೀನದಲಿತರನ್ನು ಅಧಿಕಾರದಿಂದ ದೂರ ಇಡಬೇಕೆಂಬ ಮನಸ್ಥಿತಿಯ ಬಿಜೆಪಿ ಪಕ್ಷಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ದಲಿತರು, ದಮನಿತರ ಹಕ್ಕುಗಳನ್ನು ಮೋದಿ ಸರ್ಕಾರ ಕಸಿಯುತ್ತಿದೆ. ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಮಾಡಿರುವ ಕೋವಿಡ್‌ ಸಂದರ್ಭದ ೪೦ ಸಾವಿರ ಕೋಟಿ ರು. ಅವ್ಯವಹಾರ ತನಿಖೆಯಾಗಿ, ರಾಜ್ಯದ ಜನತೆಗೆ ಸತ್ಯ ಬಹಿರಂಗವಾಗಲಿ.

ಇಕ್ಬಾಲ್ ಅಹಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಫೋಟೊ