ಸಾರಾಂಶ
-
- - -ಕನ್ನಡಪ್ರಭ ವಾರ್ತೆ ಜಗಳೂರು
ಆಪರೇಷನ್ ಸಿಂದೂರ ಮೂಲಕ ದೇಶದ ವಾಯುಪಡೆ, ನೌಕಾಪಡೆ ಮತ್ತು ಸೈನಿಕರು ಪಾಕಿಸ್ತಾನದ ಉಗ್ರರ ತಾಣಗಳನ್ನು ಉಡೀಸ್ ಮಾಡಿ, ದೇಶದ ಮಹಿಳೆಯರ ಸಿಂದೂರ ಕಾಪಾಡಿದ್ದಾರೆ. ದೇಶ ರಕ್ಷಣೆ, ಭದ್ರತೆಗಾಗಿ ನಾವು ಸದಾ ಕೇಂದ್ರ ಸರ್ಕಾರಕ್ಕೆ ಸಹಕಾರ, ಬೆಂಬಲ ನೀಡುತ್ತೇವೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಬಿಳಿಚೋಡು ಗ್ರಾಮದ ಸರ್ಕಾರಿ ಉರ್ದು ಶಾಲಾ ಆವರಣದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿತ ಕೇಂದ್ರದಿಂದ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಗಳೂರು ತಾಲೂಕಿಗೆ ಈಗಾಗಲೇ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಳಿಚೋಡು ಗ್ರಾಮದ ಉರ್ದು ಶಾಲೆಯಲ್ಲಿ ಕೊಠಡಿ ನಿರ್ಮಾಣ ₹೧೫ ಲಕ್ಷ, ಕಲ್ಲೇದೇವರಪುರದಲ್ಲಿ ಅಂಗನವಾಡಿ ಕೇಂದ್ರ ಕೊಠಡಿ ನಿರ್ಮಾಣ ₹೧೫ ಲಕ್ಷ, ಜಗಳೂರು ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ₹೧೨ ಲಕ್ಷ, ಗೋಗುದ್ದು ಗ್ರಾಮದಲ್ಲಿ ರಂಗಮಂದಿರ ನಿರ್ಮಾಣ ₹೫ ಲಕ್ಷ, ಅಣಬೂರು ಗ್ರಾಮದಲ್ಲಿ ರಂಗಮಂದಿರ ನಿರ್ಮಾಣ ₹೫ ಲಕ್ಷ, ಬೆಣ್ಣೆಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಲು ₹ ೫ ಲಕ್ಷ, ಸೊಕ್ಕೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ₹೧೦ ಲಕ್ಷ ಸೇರಿದಂತೆ ಒಟ್ಟು ₹೬೭ ಲಕ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.ಈಗ ಕೈಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು. ಆಗಾಗ ಶಾಸಕರ ಜತೆ ಬಂದು ಕಾಮಗಾರಿ ಪರಿಶೀಲನೆ ಮಾಡಲಾಗುವುದು. ಕಾಮಗಾರಿ ಕಳಪೆಯಾಗಿದ್ದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ಶಾಲೆಗಳಿಗೂ ಡಿಮ್ಯಾಂಡ್ ಬರುತ್ತೆ:ಸರ್ಕಾರಿ ಶಾಲೆಗಳ ಗಟ್ಟಿತನ ಇರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ನಗರ ಮತ್ತು ಪಟ್ಟಣಗಳಲ್ಲಿ ಪಾಲಕರು ಸರ್ಕಾರಿ ಶಾಲೆಗಳಿಗೆ ಸೇರಿಸುವುದು ತುಂಬ ವಿರಳವಾಗಿದೆ. ರಾಜ್ಯ ಸರ್ಕಾರ ಕೂಡ ಶಾಲೆಗಳ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣ ಕೊಡುವುದಕ್ಕಾಗಿ ಅನೇಕ ಬದಲಾವಣೆಗಳನ್ನು ತರುತ್ತಿದೆ. ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಕಾಲಕ್ರಮೇಣ ಸರ್ಕಾರಿ ಶಾಲೆಗಳಿಗೂ ಡಿಮ್ಯಾಂಡ್ ಬರುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ತಾಪಂ ಮಾಜಿ ಅಧ್ಯಕ್ಷ ಓಮಣ್ಣ, ಪಿಡಿಒ ನಂದಿಲಿಂಗೇಶ್ವರ, ಅರಸಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಸಣ್ಣ ಸೂರಯ್ಯ, ಮುಖಂಡರಾದ ಗಿರೀಶ್ ಒಡೆಯರ್, ರಂಗಸ್ವಾಮಿ, ನಿರ್ಮಲ, ಶಿಕ್ಷಕರಾದ ಜಲೀಲ್ ಸಾಬ್, ನೂರುಲ್ಲಾ ಸಾಬ್, ಅಶ್ರಫ್ ಉಲ್ಲಾ ಮತ್ತಿತರರಿದ್ದರು.- - -
(ಬಾಕ್ಸ್) * ಬಿಳಿಚೋಡು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಯಾವಾಗಲೂ ಬಡವರು, ದೀನ ದಲಿತರು, ಹಿಂದುಳಿದವರ ಪ್ರಗತಿಗಾಗಿ ಮಾಜಿ ಪ್ರಧಾನಿಗಳಾದ ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಅವರು ಮಾಡಿದ ಸಾಧನೆಗಳು ಇಂದಿಗೂ ಕಣ್ಣೆದುರಿಗೆ ಇವೆ. ಹಾಗೇ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತಮ ಆಡಳಿತ ನೀಡುತ್ತಿದ್ದಾರೆ. ಬಿಳಿಚೋಡು ಗ್ರಾಮದ ಮುಖ್ಯ ರಸ್ತೆಯ ಸೇತುವೆ ಶಿಥಿಲಗೊಂಡಿರುವುದು ನನ್ನ ಗಮನಕ್ಕೆ ಇದೆ. ಈಗಾಗಲೇ ಹೊಸ ಬ್ರಿಡ್ಜ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಅನುದಾನ ಬಿಡುಗಡೆಯಾಗದರೆ ಹೊಸದಾಗಿ ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.- - -
-19ಜೆ.ಜಿ.ಎಲ್.1.ಜೆಪಿಜಿ:ಜಗಳೂರು ತಾಲೂಕಿನ ತಾಲೂಕಿನ ಬಿಳಿಚೋಡು ಸರ್ಕಾರಿ ಉರ್ದು ಶಾಲಾ ಆವರಣದಲ್ಲಿ ನಡೆದ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ದೇವೇಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.