ಯಾ ದೇಶದ ಜನತೆ ಆತಂಕದಲ್ಲಿ ಜೀವಿಸುತ್ತಿದ್ದರೆ ಭಾರತ ಮಾತ್ರ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಪ್ರಪಂಚವೇ ಬೆರಗಾಗುವಂತೆ ಅಭಿವೃದ್ಧಿಯಲ್ಲಿ ಮುನ್ನಡೆದಿದೆ

ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್, ಸಿಜೆಪಿ ಹಾಗೂ ಇತರೇ ಸ್ಥಾಪಿತ ಹಿತಾಸಕ್ತಿಯ ವಿಚ್ಛಿದ್ರಕಾರಿ ಶಕ್ತಿಗಳು ಭಾರತದ ಏಕತೆ, ಅಖಂಡತೆ, ಸಮಗ್ರತೆ ಹಾಗೂ ಸ್ವಾತಂತ್ರದ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನು ಅರಾಜಕತೆ ಸೃಷ್ಠಿಸುವುದಕ್ಕೆ ದುರ್ಬಳಕೆ ಮಾಡುವುದನ್ನು ಭಾರತೀಯ ಜನತಾಪಕ್ಷ ಸಹಿಸುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಎಚ್ಚರಿಸಿದರು.ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆಗಳ ಮೂಲಕ ಅರಾಜಕತೆ ಸೃಷ್ಟಿಸುತ್ತಿರುವ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮೋದಿ ವಿಕಸಿತ ಭಾರತದ ಸಮಗ್ರ ಅಭಿವೃದ್ಧಿಯ ಹಿತಾಸಕ್ತಿಗೆ ಮತ್ತು ಜನತೆಯ ಕಲ್ಯಾಣಕ್ಕೆ ಮಾರಕವಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಪಂಚದ ಬಹುತೇಕ ದೇಶಗಳಲ್ಲಿ ಯುದ್ಧದ ಕಾರ್ಮೋಡಗಳ ದಟ್ಟವಾಗಿದ್ದು, ಆಯಾ ದೇಶದ ಜನತೆ ಆತಂಕದಲ್ಲಿ ಜೀವಿಸುತ್ತಿದ್ದರೆ ಭಾರತ ಮಾತ್ರ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಪ್ರಪಂಚವೇ ಬೆರಗಾಗುವಂತೆ ಅಭಿವೃದ್ಧಿಯಲ್ಲಿ ಮುನ್ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಳೆದ ೧೨ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರ ದೇಶದಲ್ಲಿ ಭರವಸೆಯ ಜನಹಿತದ ಆಡಳಿತ ನಡೆಸಿದೆ. ಅಭಿವೃದ್ಧಿಯ ಮೂಲಕ ದೇಶ ಮುನ್ನಡೆಸುವ ಅವರ ಕನಸಿಗೆ ಜನತೆಯಿಂದ ಮೂರು ಬಾರಿ ಬೆಂಬಲ ವ್ಯಕ್ತವಾಗಿದ್ದರೂ ಪ್ರಾಯೋಜಿತ ದಂಗೆಗಳ ಮೂಲಕ ರಾಹುಲ್ ಗಾಂಧಿ ಮತ್ತು ವಿಪಕ್ಷಗಳು ಮೋದಿ ಅವರ ಕನಸಿಗೆ ನಿರಂತರವಾಗಿ ಕೊಳ್ಳಿ ಇಡುವ ಸಂಚು ನಡೆಸಿವೆ ಎಂದು ಹರಿಹಾಯ್ದರು.

ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಭದ್ರವಾಗಿರುವ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸುವ ಸಲುವಾಗಿ ಪದೇ ಪದೇ ವಿದೇಶಕ್ಕೆ ತೆರಳುವ ರಾಹುಲ್ ಗಾಂಧಿ ಮೋದಿಯವರನ್ನು ದೇಶದ್ರೋಹಿ ಎಂದು ಬಿಂಬಿಸಲು ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ಲೇವಡಿ ಮಾಡಿದರು.

ಅರ್ಹ ಮತದಾರರ ಪಟ್ಟಿ ಕುರಿತ ಎಸ್.ಐ.ಆರ್.ವಿರುದ್ಧ ಹುಯಿಲೆಬ್ಬಿಸಿರುವ ಕಾಂಗ್ರೆಸ್ ಪಕ್ಷ ಪ್ರಕ್ರಿಯೆ ಆರಂಭಕ್ಕೂ ಮೊದಲಿನ ೨೦೧೪-೨೦೨೫ರ ನಡುವಿನ ಸಾರ್ವತ್ರಿಕ ಚುನಾವಣೆಗಳಲ್ಲಿ ನಿರಂತರವಾಗಿ ಸೋಲನ್ನೇ ಕಂಡಿದೆ. ರಾಜಕೀಯ ಇತಿಹಾಸದ ಕಸದ ಬುಟ್ಟಿಯ ಪಾಲಾಗಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಎಂಬ ಅಪ್ರಸ್ತುತ ಪಕ್ಷದ ನಾಯಕರು. ೧೯೬೭ ರಿಂದ ೨೦೨೩ ರವರೆಗಿನ ಚುನಾವಣೆಗಳಲ್ಲಿ ದೇಶದ ೨೨ ರಾಜ್ಯಗಳಲ್ಲಿ ಆಡಳಿತ ನಡೆಸುವ ಜನಾದೇಶವೇ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿಲ್ಲ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾನಾಯ್ಕ, ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್, ಪುರಸಭಾ ಸದಸ್ಯ ಜೋಗಿ ಹನಮಂತ, ಮಂಡಲ ಕಾರ್ಯದರ್ಶಿಗಳಾದ ದಿವಾಕರಗೌಡ ಹಾಗೂ ಕೋಗಳಿ ಹನಮಂತಪ್ಪ ಪಾಲ್ಗೊಂಡಿದ್ದರು.