ಬಿಜೆಪಿ ಶಾಸಕರು, ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್‌ ದೌರ್ಜನ್ಯ ನಡೆಸಿದರೆ ಸುಮ್ಮನಿರಲ್ಲ: ಆರ್‌.ಅಶೋಕ್‌

| Published : Jul 14 2024, 01:37 AM IST

ಬಿಜೆಪಿ ಶಾಸಕರು, ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್‌ ದೌರ್ಜನ್ಯ ನಡೆಸಿದರೆ ಸುಮ್ಮನಿರಲ್ಲ: ಆರ್‌.ಅಶೋಕ್‌
Share this Article
  • FB
  • TW
  • Linkdin
  • Email

ಸಾರಾಂಶ

ನೂರಾರು ಸಿದ್ಧು, ಸಾವಿರಾರು ರಾಹುಲ್‌ ಬಂದರೂ ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಪಡೆಯೇ ಇದೆ, ನಾವು ಹಿಂದು ವಿರೋಧಿ ನಿಲುವಿನ ವಿರುದ್ಧ ಹೋರಾಟ ನಡೆಸಿಯೇ ಸಿದ್ಧ ಎಂದು ಆರ್‌.ಅಶೋಕ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಧಿಕಾರ ದುರುಪಯೋಗಪಡಿಸಿ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್‌ ಸರ್ಕಾರ ದೌರ್ಜನ್ಯ ನಡೆಸಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಹೊರಟರೆ ಅದಕ್ಕೆ ಪಕ್ಷ ಅವಕಾಶ ನೀಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಗುಡುಗಿದ್ದಾರೆ.

ಮಂಗಳೂರಿನಲ್ಲಿ ರಾಹುಲ್‌ ಗಾಂಧಿ ನಿಂದಿಸಿದ ಆರೋಪದಲ್ಲಿ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದನ್ನು ವಿರೋಧಿಸಿ ಶನಿವಾರ ಕಾವೂರಿನಲ್ಲಿ ಹಮ್ಮಿಕೊಂಡ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದು ವಿಚಾರದ ವಿರುದ್ಧ ಯಾರೇ ಮಾತನಾಡಿದರೂ ಬಿಜೆಪಿ ಪ್ರತಿಭಟಿಸಲಿದೆ. ಈ ಬಗ್ಗೆ ಎಂತಹ ತ್ಯಾಗಕ್ಕೂ ಸಿದ್ಧ. ಈ ವಿಚಾರದಲ್ಲಿ ಮೊಕದ್ದಮೆ ಎದುರಿಸುವ ಬಿಜೆಪಿ ಶಾಸಕರು ಅಥವಾ ಕಾರ್ಯಕರ್ತರಿಗೆ ಪಕ್ಷ ಹಾಗೂ ನಾಯಕರು ಬೆಂಬಲವಾಗಿ ನಿಲ್ಲಲಿದ್ದಾರೆ. ರಾಜ್ಯ ಸರ್ಕಾರದ ಹಿಂದು ದಮನ ನೀತಿ ವಿರುದ್ಧ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ನೂರಾರು ಸಿದ್ಧು, ಸಾವಿರಾರು ರಾಹುಲ್‌ ಬಂದರೂ ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಪಡೆಯೇ ಇದೆ, ನಾವು ಹಿಂದು ವಿರೋಧಿ ನಿಲುವಿನ ವಿರುದ್ಧ ಹೋರಾಟ ನಡೆಸಿಯೇ ಸಿದ್ಧ ಎಂದು ಆರ್‌.ಅಶೋಕ್‌ ಹೇಳಿದರು.

ಕೇಸು ದಾಖಲಿಸುವ ಮೂಲಕ ಬಿಜೆಪಿ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲು ಸರ್ಕಾರ ಹೊರಟಿದೆ. ಪೊಲೀಸ್‌ ಇಲಾಖೆಗೆ ಒತ್ತಡ ಹಾಕಿ ಕೇಸು ದಾಖಲಿಸಲಾಗುತ್ತಿದೆ. ಪೊಲೀಸರು ಕಾಂಗ್ರೆಸ್‌ ಗಾಳದ ಗೊಂಬೆಗಳಾಗಿರುವುದು ನಾಚಿಕೆಗೇಡಿನ ಸಂಗತಿ. ರಾಹುಲ್‌ ಗಾಂಧಿಗೆ ಹೊಡೆಯಬಹುದು ಎಂದರೆ ಕೇಸು ದಾಖಲಿಸುತ್ತಾರೆ. ಆದರೆ ಅದೇ ರಾಹುಲ್‌, ಸೋನಿಯಾ ಮೋದಿ ಬಗ್ಗೆ ಮಾತನಾಡಿದ್ದಾರೆ, ಬಿಜೆಪಿ, ಹಿಂದುಗಳ ವಿರುದ್ಧ ಮಾತನಾಡಿದವರೂ ಇದ್ದಾರೆ. ಅವರ ಬಗ್ಗೆ ಮೌನ ವಹಿಸುವ ಮೂಲಕ ರಾಜ್ಯ ಸರ್ಕಾರ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರ್‌. ಅಶೋಕ್‌ ಆರೋಪಿಸಿದರು.

ರಾಹುಲ್‌ಗೆ ಕಪ್ಪುಬಾವುಟ ಪ್ರದರ್ಶನ:

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಮಾತನಾಡಿ, ಹಿಂದುಗಳ ವಿರುದ್ಧ ಲೋಕಸಭೆಯಲ್ಲಿ ಮಾತನಾಡಿ ರಾಹುಲ್‌ ಗಾಂಧಿ ದೇಶದ ಜನತೆಯ ಕ್ಷಮೆ ಕೇಳದಿದ್ದರೆ ಮಂಗಳೂರಿಗೆ ಆಗಮಿಸುವ ವೇಳೆ ಬಿಜೆಪಿ ಕಪ್ಪುಬಾವುಟ ಪ್ರದರ್ಶಿಸುವುದಾಗಿ ಹೇಳಿದರು.

ಕೆನ್ನೆಗೆ ಹೊಡೆಯಬೇಕು ಎಂದರೆ ಕಾಂಗ್ರೆಸಿಗರಿಗೆ ಇಷ್ಟು ಬೇಸರವಾದರೆ, ಯಾರಾದರೂ ಹೊಡೆದರೆ ಇನ್ನು ಏನು ಆಗಬಹುದು ಎಂದು ಲೇವಡಿ ಮಾಡಿದ ಸುನಿಲ್‌ ಕುಮಾರ್‌, ರಾಹುಲ್‌ ವಿರುದ್ಧ ಮಾತನಾಡಿದರು ಎಂದು ವಿನಾ ಕಾರಣ ಕೇಸು ಹಾಕಿದರೆ, ಬಿಜೆಪಿ ಬೆದರುವುದಿಲ್ಲ. ಸಾವಿರಾರು ಮಂದಿ ಕಾರ್ಯಕರ್ತರು ಎಲ್ಲ ಠಾಣೆಗಳಿಗೆ ಮುತ್ತಿಗೆ ಹಾಕಲಿದ್ದು, ಕಾನೂನು, ಸುವ್ಯವಸ್ಥೆಗೆ ತೊಂದರೆಯಾದರೆ ನಾವು ಹೊಣೆಯಲ್ಲ ಎಂದರು.

ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ರಾಹುಲ್‌ ಗಾಂಧಿಯ ಅಜ್ಜಿಗೆ ಬಿಜೆಪಿ ಹೆದರಿಲ್ಲ, ಇನ್ನು ರಾಹುಲ್‌ಗೆ ಹೆದರುತ್ತಾ? ಪ್ರಜಾಪ್ರಭುತ್ತವನ್ನು ಕಗ್ಗೊಲೆ ಮಾಡಲು ಕಾಂಗ್ರೆಸ್‌ ಹೊರಟಾಗ ಅದನ್ನು ಉಳಿಸಿದ್ದು ಬಿಜೆಪಿ. ರಾಜ್ಯ ಸರ್ಕಾರದ ಪತನ ಆರಂಭವಾಗಿದೆ ಎಂದು ಹೇಳಿದರು.

ಶಾಸಕರಾದ ವೇದವ್ಯಾಸ್‌ ಕಾಮತ್‌, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ಹರೀಶ್‌ ಪೂಂಜಾ, ಭಾಗೀರಥಿ, ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಸುಧೀರ್‌ ಶೆಟ್ಟಿ, ಉಪ ಮೇಯರ್‌ ಸುನೀತಾ, ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಕ್ಯಾ.ಗಣೇಶ್ ಕಾರ್ಣಿಕ್‌, ಸತೀಶ್‌ ಆರ್ವಾರ್‌, ಪ್ರೇಮಾನಂದ ಶೆಟ್ಟಿ, ವಿಕಾಸ್‌, ಉದಯ ಕುಮಾರ್‌ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್‌, ಆರ್‌.ಸಿ.ನಾರಾಯಣ್‌, ರಾಜೇಶ್‌ ಕೊಟ್ಟಾರಿ, ಕಿಶೋರ್‌ ಬೊಟ್ಯಾಡಿ, ಶಾಂತಿ ಪ್ರಸಾದ್‌ ಹೆಗ್ಡೆ ಮತ್ತಿತರರಿದ್ದರು.

ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಘೋಷಣೆ ಕೂಗಿದರು. ಬಳಿಕ ಮೆರವಣಿಗೆಯಲ್ಲಿ ಕಾವೂರು ಪೊಲೀಸ್‌ ಠಾಣೆಗೆ ತೆರಳಿದರು. ಅಲ್ಲಿ ಡಾ.ಭರತ್‌ ಶೆಟ್ಟಿ ಅ‍ವರು ಪ್ರಮುಖ ನಾಯಕರೊಂದಿಗೆ ತೆರಳಿ ಠಾಣಾಧಿಕಾರಿ ಎದುರು ನೋಟಿಸ್‌ಗೆ ಉತ್ತರ ನೀಡಿದರು. ................

ಹಿಂದುತ್ವ ವಿರುದ್ಧ ಮಾತನಾಡಿದ್ರೆ ಟ್ರೀಟ್‌ಮೆಂಟ್‌: ಡಾ.ಭರತ್‌ ಶೆಟ್ಟಿ

ಹಿಂದುತ್ವ ವಿರುದ್ಧ ಯಾರೇ ಮಾತನಾಡಿದರೂ ನಾವು ವಿರೋಧಿಸುತ್ತೇವೆ. ರಾಹುಲ್‌ ಗಾಂಧಿಗಾದರೂ ಇದೇ ಟ್ರೀಟ್‌ಮೆಂಟ್‌ ಕೊಡುತ್ತೇವೆ ಎಂದು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಭಾಷಣದಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಗೆ ಅಲ್ಲಿ ಯಾರಾದರೂ ಹೊಡೆಯಬೇಕು ಎಂದು ಹೇಳಿದ್ದೇನೆಯೇ ವಿನಃ ನಾನು ಹೊಡೆಯುತ್ತೇನೆ ಎಂದಿಲ್ಲ, ನಾನು ಹೊಡೆಯಲು ಲೋಕಸಭೆಗೆ ಹೋಗಲು ಆಗುತ್ತದೆಯೇ? ಅಷ್ಟೊಂದು ಯೋಚನೆ ಕಾಂಗ್ರೆಸಿಗರಿಗೆ ಇಲ್ಲ. ನನ್ನ ವಿರುದ್ಧ ಪ್ರತಿಭಟನೆಯ ಡಿಸ್ಕೋ ಡ್ಯಾನ್ಸ್‌ ಮಾಡುವವರು ಜೋಕರುಗಳು, ಅವರ ಬಗ್ಗೆ ಏನೂ ಹೇಳುವುದಿಲ್ಲ, ಅವರ ಅವಸ್ಥೆ ನೋಡಿದರೆ ಮರುಕವಾಗುತ್ತಿದೆ ಎಂದು ಲೇವಡಿ ಮಾಡಿದರು.