ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಂದ ಕುಮಾರ ಬಂಗಾರಪ್ಪಗೆ ಕಪ್ಪ ಕಾಣಿಕೆ ಸಂದಿದೆ ಎಂದು ಕಾಂಗ್ರೆಸ್ ಮುಖಂಡರು ನೀಡಿರುವ ಹೇಳಿಕೆ ನಿರಾಧಾರವಾದದ್ದು. ಇಂಥ ಒಪ್ಪಂದದ ರಾಜಕಾರಣ ನಮ್ಮ ನಾಯಕರಾದ ಕುಮಾರ ಬಂಗಾರಪ್ಪ ಎಂದೂ ಮಾಡಿಲ್ಲ. ಮಾಡುವುದೂ ಇಲ್ಲ. ಕಾಂಗ್ರೆಸ್ ಮುಖಂಡರ ಸಲ್ಲದ ಹೇಳಿಕೆ ಖಂಡಿಸುವುದಾಗಿ ಬಿಜೆಪಿ ಒಬಿಸಿ ತಾಲೂಕು ಅಧ್ಯಕ್ಷ, ಈಡಿಗ ಸಮಾಜದ ಮುಖಂಡ ಎಂ.ಡಿ. ಉಮೇಶ ತಿಳಿಸಿದರು.ಮಂಗಳವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಬಿಜೆಪಿ ಈಡಿಗ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,
ಕುಮಾರ ಬಂಗಾರಪ್ಪರು ಬಿಜೆಪಿ ಶಾಸಕರಾಗಿದ್ದ ೫ ವರ್ಷಗಳ ಅವಧಿಯಲ್ಲಿ ₹೨ ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಹಾಗೆಯೇ ಬಿ.ವೈ.ರಾಘವೇಂದ್ರ ಕೂಡಾ ತಾಲೂಕಿನ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇಬ್ಬರ ಚಿಂತನೆಗಳು ಅಭಿವೃದ್ಧಿಯಾಗಿದ್ದು, ಜಿಲ್ಲೆಗೆ ಕುಮಾರ ಬಂಗಾರಪ್ಪ ಹಾಗೂ ಬಿ.ವೈ.ರಾಘವೇಂದ್ರ ಜೋಡೆತ್ತುಗಳು. ಹೀಗಿರುವಾಗ ಕಪ್ಪ ಕಾಣಿಕೆ ಪಡೆದು ಪ್ರಚಾರ ನಡೆಸುವ ದುಸ್ಥಿತಿ ನಮ್ಮ ನಾಯಕರಿಗೆ ಬಂದಿಲ್ಲ. ಹೊಂದಾಣಿಕೆ ರಾಜಕಾರಣ ಎನ್ನುವುದು ಕಾಂಗ್ರೆಸ್‌ನಲ್ಲಿ ಮಾತ್ರ ಇದೆ ಎಂದು ತಿರುಗೇಟು ನೀಡಿದರು.ಕುಮಾರ ಬಂಗಾರಪ್ಪರ ಬಗ್ಗೆ ಸಲ್ಲದ ಆರೋಪ ಮಾಡಿರುವ ತಬಲಿ ಬಂಗಾರಪ್ಪ ಜಿಪಂ ಸದಸ್ಯರಾಗಿದ್ದು, ಬಗರ್‌ಹುಕುಂ ಕಮಿಟಿ ಅಧ್ಯಕ್ಷರಾಗಿದ್ದು ಮತ್ತು ಕಾಂಗ್ರೆಸ್‌ನ ವಿವಿಧ ಹುದ್ದೆಯಲ್ಲಿರುವಂತೆ ಮಾಡಿದ್ದು, ಕುಮಾರ ಬಂಗಾರಪ್ಪ ಅವರೇ ಹೊರತು ಈಗಿನ ಸಚಿವರಲ್ಲ. ತಾವೂ ಸೇರಿ ತಮ್ಮ ಕುಟುಂಬಸ್ಥರೆಲ್ಲರಿಗೂ ಬಡವರಿಗೆ ನೀಡಬೇಕಿದ್ದ ಬಗರ್‌ಹುಕುಂ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಇಂಥ ಭ್ರಷ್ಟ ವ್ಯಕ್ತಿ ಕುಮಾರ ಬಂಗಾರಪ್ಪರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾರಾಯಣಗುರು ವಸತಿ ಶಾಲೆಗೆ ೯ ಎಕರೆ ಜಮೀನು ಮಂಜೂರು ಮಾಡಲಾಗಿದೆ. ಅಲ್ಲದೇ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ₹೨ ಕೋಟಿ ಈಡಿಗ ಸಮಾಜದ ಅಭಿವೃದ್ಧಿಗೆ ನೀಡಲಾಗಿದೆ. ಆರ್ಯ ಈಡಿಗ ಭವನಕ್ಕೆ ₹೨ ಕೋಟಿ ನೀಡಿದ್ದಾರೆ. ಆದರೆ ಕಾಂಗ್ರೆಸ್ ಈಡಿಗ ಸಮಾಜಕ್ಕೆ ಯಾವುದೇ ಅಭಿವೃದ್ಧಿ ಅನುದಾನ ನೀಡಿಲ್ಲ. ಈ ಕಾರಣದಿಂದ ಜಿಲ್ಲೆಯ ಈಡಿಗ ಸಮಾಜದ ಮತಗಳು ಒಂದಡೆ ಕ್ರೋಢಿಕರಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ೨ ಲಕ್ಷ ಅಧಿಕ ಮತಗಳ ಅಂತರದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಕೆ. ಅಜ್ಜಪ್ಪ ಮಾತನಾಡಿ, ಈಡಿಗ ಸಮಾಜಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಪತಿ ಶಿವರಾಜ್‌ಕುಮಾರ ಕೊಡುಗೆ ಏನು ಎಂದು ಪ್ರಶ್ನಿಸಿ, ಕಳೆದ ೧೦ ವರ್ಷಗಳ ಹಿಂದೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ೩ನೇ ಸ್ಥಾನಕ್ಕೆ ಕುಸಿದಿದ್ದ ಗೀತಾ ಅವರಿಗೆ ಚುನಾವಣೆ ಕಾಲದಲ್ಲಿ ಶಿವಮೊಗ್ಗ ಮತ್ತು ಜಿಲ್ಲೆಯ ಈಡಿಗ ಮತಗಳು ನೆನಪಾಗುತ್ತವೆ. ಎಸ್.ಬಂಗಾರಪ್ಪ ಪುತ್ಥಳಿ ನಿರ್ಮಾಣಕ್ಕೆ ₹೨ ಕೋಟಿ ಸೇರಿ ಸೊರಬ, ಶಿವಮೊಗ್ಗ, ಹೊಸನಗರ, ಸಾಗರ, ಸಾಲೂರುಗಳಲ್ಲಿ ಈಡಿಗ ಸಮುದಾಯ ಭವನಕ್ಕೆ ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಮತ್ತು ಕುಮಾರ ಬಂಗಾರಪ್ಪ ಅವರು ಅನುದಾನದ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಗೀತಾ ಅವರಿಗೆ ಈಡಿಗ ಮತ ಕೇಳುವ ನೈತಿಕತೆ ಇಲ್ಲ ಎಂದರು.
ಸಭೆಯಲ್ಲಿ ಈಡಿಗ ಸಮಾಜದ ಮುಖಂಡರಾದ ವಿನಾಯಕ ತವನಂದಿ, ಜಗದೀಶ ಗೆಂಡ್ಲ, ಹೊಸೂರು ಪುಟ್ಟಪ್ಪ, ಕೆ.ಜಿ. ಬಸವರಾಜ ಕೊಡಕಣಿ, ಶಿವಕುಮಾರ ಕಡಸೂರು, ಜಾನಕಪ್ಪ ಯಲಸಿ, ಗುರುಮೂರ್ತಿ ಚಿಕ್ಕಶಕುನ, ದಿನೇಶ ಸಂಪಗೋಡು, ಆರ್. ರವೀಂದ್ರನಾಯ್ಕ, ಮೋಹನ ಹಳೇಸೊರಬ, ಭರತ್, ಟೀಕಪ್ಪ, ಮಂಜಪ್ಪ ಕರಡಿಗೇರಿ, ಶಿವಪ್ಪ ಮೊದಲಾದವರಿದ್ದರು.