ಸಾರಾಂಶ
ಅನ್ನದಾತನಿಗೆ ಈ ರೀತಿ ಸುಳ್ಳು ಭರವಸೆ ಮತ್ತು ಆಸೆ ಹುಟ್ಟಿಸಿ ನಿರಾಸೆಗೊಳಿಸಿದ ಇಂತಹ ಸರ್ಕಾರಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ಹೇಳಿದ್ದಾರೆ.
ಕಾರವಾರ: ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಘೋಷಿಸಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತಿಗೆ ತಪ್ಪಿದೆ. ಇದರಿಂದ ರೈತರು ತೀವ್ರ ತೊಂದರೆಗೊಳಗಾಗಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕದ ಈಗಿನ ಕಾಂಗ್ರೆಸ್ ಸರ್ಕಾರ ಆಯ್ಕೆಯಾಗಿ ಬಂದು ಪ್ರಥಮದಲ್ಲಿಯೇ ರೈತರಿಗೆ ವಿಶೇಷ ಕೊಡುಗೆ ನೀಡುವ ಭರವಸೆ ನೀಡಿತ್ತು. ಆನಂತರ ಕಳೆದ ಬಜೆಟ್‌ನಲ್ಲಿಯೂ ಕೂಡ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷ ತನಕ ಸಾಲ ಮತ್ತು ಶೇ. 3 ಬಡ್ಡಿ ದರದಲ್ಲಿ ₹15 ಲಕ್ಷ ವರೆಗೆ ಸಾಲ ನೀಡಿ ರೈತರನ್ನು ಸಂಕಷ್ಟದಿಂದ ಮೇಲೆತ್ತುತ್ತೇವೆಂದು ಘೋಷಣೆ ಮಾಡಿತ್ತು. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಈ ಭರವಸೆಯನ್ನು ನಂಬಿ ಅನೇಕ ರೈತರು ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿಗಾಗಿ ಶೇ. 10ರಿಂದ 12 ಬಡ್ಡಿ ದರದಲ್ಲಿ ಸಾಲವನ್ನು ಮಾಡಿ ಹಣ ತೊಡಗಿಸಿಕೊಂಡಿದ್ದಾರೆ. ಆದರೆ ಸರ್ಕಾರದ ಈ ಯೋಜನೆ ಜಾರಿಗೊಳ್ಳದೆ ಇರುವುದರಿಂದ ಬಡ್ಡಿ ಮತ್ತು ಅಸಲನ್ನು ತುಂಬಲು ಸಾಧ್ಯವಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಅನ್ನದಾತನಿಗೆ ಈ ರೀತಿ ಸುಳ್ಳು ಭರವಸೆ ಮತ್ತು ಆಸೆ ಹುಟ್ಟಿಸಿ ನಿರಾಸೆಗೊಳಿಸಿದ ಇಂತಹ ಸರ್ಕಾರಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.ಅಲ್ಲದೆ ಚುನಾವಣೆಯ ನಂತರ ಈ ಭರವಸೆ ಈಡೇರಿಕೆಗೆ ಜಿಲ್ಲೆಯಾದ್ಯಂತ ರೈತರಿಂದ ಹೋರಾಟ ಪ್ರಾರಂಭಿಸಲಾಗುವುದು. ಅಲ್ಲದೆ ಇಷ್ಟು ದಿವಸ ರೈತರಿಗೆ ಪೂರಕವಾದಂತಹ ಯೋಜನೆಗಳನ್ನು ಮತ್ತು ಯೋಚನೆಗಳನ್ನು ನೀಡಿದವರು ಯಾರು ಮತ್ತು ನುಡಿದಂತೆ ನಡೆದವರು ಯಾರು ಎನ್ನುವುದನ್ನು ಯೋಚಿಸಿ ಅವರನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೆ 18 ವರ್ಷ ಮೇಲ್ಪಟ್ಟ ಎಲ್ಲ ರೈತ ಬಾಂಧವರು ಮೇ 7ರಂದು ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ, ನಮ್ಮ ಹಕ್ಕನ್ನು ಪ್ರತಿಪಾದಿಸಬೇಕಾಗಿ ಶಿವರಾಮ ಗಾಂವಕರ ವಿನಂತಿಸಿದ್ದಾರೆ.