ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಮಂಗಳವಾರ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.ಪೂಜೆಯ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ, ಮಂತರ್ ಗೌಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ್ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಗೆದ್ದರೆ ಕೊಡಗಿನ ಪ್ರವಾಸೋದ್ಯಮ ವಿಶೇಷ ಅಭಿವೃದ್ಧಿ ಮಾಡಲಾಗುವುದು. ಕ್ಷೇತ್ರದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.ಮಡಿಕೇರಿ -ವಿರಾಜಪೇಟೆ ಕ್ಷೇತ್ರ ದ ಶಾಸಕರು ತಲಾ ರು. 350 ಕೋಟಿ ಅನುದಾನ ತಂದು ಕೊಡಗಿನ ಅಭಿವೃದ್ಧಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರವನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಗಡಿಯಲ್ಲಿ ಸ್ವಾಗತ:ಲಕ್ಷ್ಮಣ್ ಗೌಡ ಅವರಿಗೆ ಮಂಗಳವಾರ ಬೆಳಗ್ಗೆ ಆನೆ ಚೌಕೂರು ಗೇಟಿನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಇಬ್ಬರು ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.
ಮೈಸೂರಿನಿಂದ ಆಗಮಿಸಿದ ಲಕ್ಷ್ಮಣ್ ಅವರನ್ನು ಶಾಲು ಹಾಗೂ ಹಾರ ಹಾಕುವ ಮೂಲಕ ಲೋಕಸಭಾ ಅಭ್ಯರ್ಥಿಯಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಂದರ್ಭ ಬರಮಾಡಿಕೊಳ್ಳಲಾಯಿತು.ಜಿಲ್ಲೆಗೆ ಲಕ್ಷ್ಮಣ್ ಅವರನ್ನು ಸ್ವಾಗತಿಸಿ ಮಾತನಾಡಿದ ಶಾಸಕ ಎ.ಎಸ್. ಪೂನ್ನಣ್ಣ ಮಾತನಾಡಿ, ಇಂದಿನಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇವೆ. ಮೊದಲಿಗೆ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ನಂತರ ತಲಕಾವೇರಿಯಲ್ಲಿ ಮಾತೆಕಾವೇರಿಗೆ ನಮಿಸಿ ಪೂಜಿಸಿ, ಮಾಜಿ ಯೋಧರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿ ಚುನಾವಣೆಗೆ ಅಣಿಯಾಗುತ್ತಿದ್ದೇವೆ ಎಂದು ಹೇಳಿದರು.
ನಂತರ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕೊಡಗಿನ ಜನತೆ ತನನ್ನು ಹಾಗೂ ಪೊನ್ನಣ್ಣ ಅವರನ್ನು ಕಳೆದ ಚುನಾವಣೆಯಲ್ಲಿ ಆರಿಸಿ ಕಳುಹಿಸಿದ್ದಾರೆ. 10 ತಿಂಗಳ ನಮ್ಮ ಅಭಿವೃದ್ಧಿ ಕೆಲಸಗಳು ಗಮನಿಸಿ ಜನತೆ ಮತ ನೀಡುವಂತೆ ಕೋರಿಕೊಂಡರು. ನಮ್ಮ ಚುನಾವಣೆಗಿಂತ ಇನ್ನೂ ಹೆಚ್ಚಾಗಿ ನಾವು ಕೆಲಸ ನಿರ್ವಹಿಸಿ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು. ನಂತರ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್, ಕೊಡಗಿನಲ್ಲಿ 25 ವರ್ಷಗಳ ನಂತರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ ಮುಕ್ತಿ ನೀಡಿದ್ದಾರೆ. ಕಳೆದ 10 ತಿಂಗಳಿಂದ ದಿನದ 24 ತಾಸು ಇಬ್ಬರು ಶಾಸಕರು ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದ್ದಾರೆ. ಅವರೊಂದಿಗೆ ಕೆಲಸ ನಿರ್ವಹಿಸಲು ನನ್ನನ್ನು ಲೋಕಸಭಾ ಸದಸ್ಯನ್ನಾಗಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ, ಪಕ್ಷದ ರಾಜ್ಯ ಮುಖಂಡ ಚಂದ್ರಮೌಳಿ, ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.