ಮಠಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ

| Published : Apr 08 2024, 01:02 AM IST

ಮಠಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣಕಾಶಿ ಶಿವಗಂಗೆ ಹಲವಾರು ಮಠಾಧೀಶರು ತಪಸ್ಸು ಮಾಡಿದ ತಪೋಭೂಮಿ, ಇಲ್ಲಿಗೆ ಭೇಟಿ ನೀಡಿದ್ದು ಸಂತಸವಾಗಿದೆ. ಮೂರು ಮಠದ ಪೂಜ್ಯರು ಗೆಲುವು ಸಾಧಿಸಿ ಎಂದು ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದವೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ರಕ್ಷಾ ರಾಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದು, ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಕೈಹಿಡಿಯಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ತಿಳಿಸಿದರು.

ಸೋಂಪುರ ಹೋಬಳಿಯ ಕಂಬಾಳು ಮಠ ಹಾಗೂ ಶಿವಗಂಗೆ ಹೊನ್ನಮ್ಮಗವಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ದಕ್ಷಿಣಕಾಶಿ ಶಿವಗಂಗೆ ಹಲವಾರು ಮಠಾಧೀಶರು ತಪಸ್ಸು ಮಾಡಿದ ತಪೋಭೂಮಿ, ಇಲ್ಲಿಗೆ ಭೇಟಿ ನೀಡಿದ್ದು ಸಂತಸವಾಗಿದೆ. ಮೂರು ಮಠದ ಪೂಜ್ಯರು ಗೆಲುವು ಸಾಧಿಸಿ ಎಂದು ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದವೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

ಯುವಕರು ಹೆಚ್ಚಾಗಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಸ್ಥಳೀಯ ನೆಲಮಂಗಲ ಶಾಸಕರು ಕ್ರಿಯಾಶೀಲವಾಗಿರುವುದು ಸಹಕಾರಿಯಾಗಿದೆ, ಧರ್ಮ-ಅಧರ್ಮ, ಸತ್ಯ-ಮಿಥ್ಯಗಳ ನಡುವಿನ ಚುನಾವಣೆ ಇದಾಗಲಿದೆ ಎಂದರು.

ಶಾಸಕರೇ ಸ್ಟಾರ್ ಪ್ರಚಾರಕರು: ಬಿಜೆಪಿ ಪಕ್ಷದವರು ಚುನಾವಣಾ ಪ್ರಚಾರಕ್ಕಾಗಿ ಸ್ಟಾರ್ ಪ್ರಚಾರಕರನ್ನು ನೇಮಿಸಿದ್ದಾರೆ, ಆದರೆ ನನಗೆ ಸ್ಥಳೀಯ ಶಾಸಕರಾದ ಶ್ರೀನಿವಾಸ್ ರವರೇ ಈ ಕ್ಷೇತ್ರದ ಸ್ಟಾರ್ ಪ್ರಚಾರಕರಾಗಿದ್ದು, ಕ್ಷೇತ್ರದಲ್ಲಿರುವ ನಮ್ಮ ಶಾಸಕರು, ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಮಾಧ್ಯಮಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿತ್ತು. ಆದರೆ ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುವ ಕೆಲವು ಮಾಧ್ಯಮಗಳನ್ನು ಕಡಿವಾಣ ಹಾಕಲು ಹೊರಟಿದ್ದಾರೆ ಎಂದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯುವ ನಾಯಕ ರಕ್ಷಾರಾಮಯ್ಯ ಗೆಲುವು ಸಾಧಿಸಲಿದ್ದಾರೆ, ವಿಧಾನಸಭೆ ಚುನಾವಣೆಯಂತೆಯೇ ಎಲ್ಲಾ ಕಾರ್ಯಕರ್ತರು ಸಂಘಟಿತರಾಗಿ, ನಮ್ಮ ಪಕ್ಷದ ಗ್ಯಾರಂಟಿಗಳ ಬಗ್ಗೆ ಮನೆ ಮನೆಗೆ ತಿಳಿಸಬೇಕಿದೆ ಎಂದರು.

ಸ್ವಾಮೀಜಿಯವರೊಂದಿಗೆ ಗೌಪ್ಯ ಮಾತುಕತೆ:

ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರು ಅಭ್ಯರ್ಥಿ ರಕ್ಷಾ ರಾಮಯ್ಯ ಹಾಗೂ ಶಾಸಕ ಎನ್.ಶ್ರೀನಿವಾಸ್ ರವರ ಜೊತೆ ಪ್ರತ್ಯೇಕವಾಗಿ ಕೊಠಡಿಯಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಸುದೀರ್ಘವಾಗಿ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಇದೇ ವೇಳೆ ಕಂಬಾಳು ಮಠ, ಹೊನ್ನಮ್ಮಗವಿ ಮಠ, ಬಂಡೆ ಮಠಗಳಿಗೆ ಭೇಟಿ ಮಠಾಧ್ಯಕ್ಷರ ಆಶೀರ್ವಾದ ಪಡೆದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್. ಗೌಡ, ಬ್ಲಾಕ್ ಅಧ್ಯಕ್ಷ ನಾಗರಾಜು, ಅಗಳಕುಪ್ಪೆ ಗೋವಿಂದರಾಜು, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ನಾರಾಯಣಗೌಡ, ಮಿಲ್ಟ್ರೀ ಮೂರ್ತಿ, ಪುರಸಭಾ ಸದಸ್ಯ ಪ್ರದೀಪ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಅಂಚೆಮನೆ ಪ್ರಕಾಶ್, ತಟ್ಟೆಕೆರೆ ಬಾಬು, ಯೋಗನಂದೀಶ್, ಗ್ರಾಪಂ ಸದಸ್ಯ ಮನು ಪ್ರಸಾದ್, ಯೂತ್ ಕಾಂಗ್ರೆಸ್ ನ ಕಿರಣ್ ಕುಮಾರ್, ಮನುಕುಮಾರ್ ಹಾಗೂ ಹಲವು ಕಾರ್ಯಕರ್ತರಿದ್ದರು.