ಸಾರಾಂಶ
ತುರುವೇಕೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಗೆಲುವು ನಿಶ್ಚಿತ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೂನ್ ೩ ರಂದು ನಡೆಯಲಿರುವ ಶಿಕ್ಷಕರ ಕ್ಷೇತ್ರದಲ್ಲಿ ಶ್ರೀನಿವಾಸ್ ಅತಿ ಹೆಚ್ಚಿನ ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದರು.
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗ ನೌಕರರಿಗೆ ಒ.ಪಿ.ಎಸ್ ಜಾರಿಗೆ ತರಲು ಚಿಂತನೆ ನಡೆಸಿದೆ. ನಮ್ಮ ತಾಲೂಕಿನಲ್ಲಿ ೩೫೦ ಪದವೀಧರ ಶಿಕ್ಷಕರ ಮತಗಳಿದ್ದು, ಅದರಲ್ಲಿ 250 ಕ್ಕೂ ಹೆಚ್ಚು ಮತಗಳು ನಮ್ಮ ಪಕ್ಷದ ಅಭ್ಯರ್ಥಿಗೆ ಲಭಿಸಲಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರೂ ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಶಿಕ್ಷಕ ವರ್ಗ ಅವರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದೆ. ಈ ಬಾರಿ ಅವರ ಸೋಲು ಕಟ್ಟಿಟ್ಟ ಬುತ್ತಿ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯಾಗಿರುವುದು ಕಾಂಗ್ರೆಸ್‌ಗೆ ವರದಾನವಾಗಿದೆ ಎಂದರು.
ಬಿಜೆಪಿಗೆ ಮತ ನೀಡಲು ಮನಸ್ಸಿಲ್ಲದ ಜೆಡಿಎಸ್ ಬೆಂಬಲಿತರಾಗಿರುವ ಸಾವಿರಾರು ಶಿಕ್ಷಕರು ನೇರವಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಮೈತ್ರಿ ಅಭ್ಯರ್ಥಿ ಬಗ್ಗೆ ಪಕ್ಷಗಳ ಮುಖಂಡರಲ್ಲಿ ಅಸಮಾಧಾನವಿದೆ. ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿದಿಲ್ಲ. ಎಲ್ಲರೂ ತಟಸ್ಥರಾಗಿದ್ದಾರೆ. ಅವರೆಲ್ಲರ ಬೆಂಬಲ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು. ಎರಡು ಪಕ್ಷಗಳಲ್ಲಿ ಸಮನ್ವಯ ಕೊರತೆ ಇದೆ. ಇದು ನಮಗೆ ಅನುಕೂಲವೇ ಆಗಿದೆ. ಶಿಕ್ಷಕರು ನಮ್ಮ ಕಾಂಗ್ರೆಸ್ ಪಕ್ಷದ ಉತ್ತಮ ಆಡಳಿತವನ್ನು ಕಂಡಿದ್ದು ನಮ್ಮ ಅಭ್ಯರ್ಥಿಯ ಪರ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರಿ ಸೌಮ್ಯದ ಎಲ್ಲಾ ಕಂಪನಿಗಳ ಖಾಸಗೀಕರಣಕ್ಕೆ ಮುಂದಾಗಿರುವುದು ದುರಂತ. ಕೆಲವೇ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಶಾಲಾ ಕಾಲೇಜುಗಳನ್ನು ಅದಾನಿ, ಅಂಬಾನಿಯವರಿಗೆ ಮಾರಲಿದ್ದಾರೆ. ಈಗಾಗಲೇ ಬಂದರು, ರೈಲ್ವೇ ನಿಲ್ದಾಣ, ಬಿ.ಎಸ್.ಎನ್.ಎಲ್, ಸೇರಿದಂತೆ ಅನೇಕ ಕಾರ್ಖಾನೆಗಳನ್ನು ಅಂಬಾನಿಗೆ ಮಾರಿದ್ದಾರೆ ಎಂದರು.
ಗುಬ್ಬಿ ತಾಲೂಕಿನ ಬಳಿ ಲಿಂಕ್ ಕೆನಾಲ್ ಮುಖಾಂತರ ರಾಮನಗರ, ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ 25 ಟಿ.ಎಂ.ಸಿ. ನೀರನ್ನು ಹರಿಸಿ ನಂತರ ರಾಮನಗರ, ಮಾಗಡಿಗೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಲಿ. ನಮ್ಮ ಜಿಲ್ಲೆಗೆ ಅನ್ಯಾಯವಾಗಲು ಜಿಲ್ಲಾ ಸಚಿವರುಗಳಾದ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಬಿಡುವುದಿಲ್ಲ ಎಂದರು. ಮಾಗಡಿ, ರಾಮನಗರ, ಕನಕಪುರದವರೂ ಸಹ ನಮ್ಮವರೇ. ಒಟ್ಟಿನಲ್ಲಿ ಜಿಲ್ಲೆಗೆ ಅಗತ್ಯವಿರುವಷ್ಟು ನೀರು ನೀಡಿ, ಹೆಚ್ಚು ನೀರನ್ನು ಚಾನಲ್‌ನಲ್ಲಿ ಹರಿಸಿ ಆ ನಗರಗಳಿಗೆ ನೀಡಲಿ ಎಂದು ಸ್ಪಷ್ಟಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನಕುಮಾರ್, ಪಪಂ ಮಾಜಿ ಅಧ್ಯಕ್ಷ ಶಶಿಶೇಖರ್, ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಕೆಂಪರಾಜ್, ರಾಹುಲ್, ಗವಿರಂಗಪ್ಪ, ಸೈಯ್ಯದ್ ನೂರ್‌ಉಲ್ಲಾ, ಅಲ್ತಾಫ್, ಬೇವಿನಹಳ್ಳಿ ಬಸವರಾಜು, ಕುಮಾರ್ ಪಾಲ್ಗೊಂಡಿದ್ದರು.