ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವು ನಿಶ್ಚಿತ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.ತಾಲೂಕಿನ ಪೂರಿಗಾಲಿ ಸರ್ಕಾರಿ ಪ್ರಾಥಮಿಕ ಶಾಲೆಯ 248 ಮತಗಟ್ಟೆಯಲ್ಲಿ ಪತ್ನಿ ಶಶಿಕಲಾ, ಪುತ್ರ ಯುವರಾಜ್ ಹಾಗೂ ಪುತ್ರಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತಚಲಾವಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಉತ್ಸಾಹ ಹಾಗೂ ಸಾರ್ವಜನಿಕರ ಉತ್ತಮ ಸ್ಪಂದನೆಯನ್ನು ನೋಡಿದರೇ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದರು.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮತದಾರರು ಕಾಂಗ್ರೆಸ್ ಕೈ ಹಿಡಿಯಲಿವೆ. ಮೊದಲನೇ ಹಂತದ ಚುನಾವಣೆಯಲ್ಲಿ 12, 2ನೇ ಹಂತದ 8ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ಪ್ರಜಾಪ್ರಭುತ್ವದ ಹಬ್ಬದಲ್ಲಿ ಮಳವಳ್ಳಿ ಕ್ಷೇತ್ರದ ಮತದಾರರು ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದ ಎಲ್ಲಾ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಸಣ್ಣಪುಟ್ಟ ಸಮಸ್ಯೆ ಹೊರತು ಪಡಿಸಿ ಶಾಂತಿಯುತವಾಗಿ ಮತದಾನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಉತ್ತಮ ಸ್ಪಂದನೆ, ಭಾರಿ ಮತಗಳ ಅಂತರದಲ್ಲಿ ಗೆಲುವು: ವೆಂಕಟರಮಣೆಗೌಡಮದ್ದೂರು:
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನನಗೆ ಉತ್ತಮ ಸ್ಪಂದನೆಯಿದ್ದು, ಚುನಾವಣೆಯಲ್ಲಿ ಅಧಿಕ ಅಂತರಗಳ ಮತಗಳಿಂದ ಜಯಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್ ಚಂದ್ರು) ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ಪುರಾಣ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಪಟ್ಟಣದಲ್ಲಿ ನಿರ್ಮಿಸಿರುವ ಸಖಿ ವಿಶೇಷ ಮತಗಟ್ಟೆ ಹಾಗೂ ವಿಶೇಷ ಚೇತನರ ಮತಗಟ್ಟೆಗೆ ಭೇಟಿ ನೀಡಿ ಮತದಾರರಿಂದ ಮತಯಾಚಿಸಿ ಮಾತನಾಡಿದರು.
ಎರಡು ತಿಂಗಳಿಂದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ನನಗೆ ಅತ್ಯಧಿಕ ಮತಗಳು ಲಭಿಸುವ ವಿಶ್ವಾಸವಿದೆ ಎಂದರು.ನನಗೆ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಹಾಗೂ ಜನಪರ ಯೋಜನೆಗಳು ಹಾಗೂ ಜಿಲ್ಲೆಯ ಶಾಸಕರ ಸಹಕಾರದಿಂದ ಜಯಗಳಿಸಲು ಉತ್ತಮ ಅವಕಾಶವಿದೆ ಎಂದು ಹೇಳಿದರು.
ಈ ವೇಳೆ ಶಾಸಕ ಕೆ.ಎಂ.ಉದಯ್, ಶಾಸಕ ಪತ್ನಿ ವಿನುತ , ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್ ಬಾಬು, ಮುಖಂಡ ಸಂತೋಷ್ ಸೇರಿದಂತೆ ಇತರರು ಇದ್ದರು.1 ಲಕ್ಷ ಮತಗಳ ಅಂತರದಿಂದ ಗೆಲುವು: ಕೆ.ಎಂ.ಉದಯ್
ಮದ್ದೂರು:ಶಾಸಕ ಕೆ.ಎಂ.ಉದಯ್ ಸ್ವಗ್ರಾಮ ತಾಲೂಕಿನ ಕದಲೂರು ಗ್ರಾಮದಲ್ಲಿ ಪತ್ನಿ ವಿನುತ ಅವರೊಂದಿಗೆ ಅಗಮಿಸಿ ಮತ ಚಲಾಯಿಸಿದರು.ನಂತರ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಚಂದ್ರು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.ಜಿಲ್ಲೆಯ ಇತಿಹಾಸದಲ್ಲಿ ಕ್ಷೇತ್ರದ ಮತದಾರರು ಸ್ಥಳೀಯ ಅಭ್ಯರ್ಥಿ ಆಯ್ಕೆ ಮಾಡುತ್ತಾರೆಯೇ ಹೊರತು ಹೊರ ಜಿಲ್ಲೆಯವರನ್ನಲ್ಲ. ಜಿಲ್ಲೆಯ ಜನತೆ ಪ್ರಜ್ಞಾವಂತರು ಸ್ವಾಭಿಮಾನವನ್ನು ಎಂದಿಗೂ ಬಿಟ್ಟು ಕೊಡಲ್ಲ ಎಂದರು.
ಈ ವೇಳೆ ವಿನುತಾ ಉದಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್ ಇದ್ದರು.