ಸಾರಾಂಶ
ಶಿವಮೊಗ್ಗ ಅಭಿವೃದ್ಧಿಗೆ ಆದ್ಯತೆ ನೀಡದ ಬಿ.ವೈ.ರಾಘವೇಂದ್ರ ಇದೀಗ ಟೊಳ್ಳು ಆಶ್ವಾಸನೆ ನೀಡುತ್ತಿರುವುದು ದುರಂತದ ಸಂಗತಿಯಾಗಿದ್ದು, ಜನ ಇದೀಗ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಗೆಲುವು ಖಚಿತ ಎಂದು ಮಾಜಿ ಉಪಮೇಯರ್ ಮೊಹಮ್ಮದ್ ಸನಾವುಲ್ಲಾ ಹೇಳಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಸುಮಾರು 15 ವರ್ಷ ಆಡಳಿತದಲ್ಲಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡದ ಬಿ.ವೈ.ರಾಘವೇಂದ್ರ ಇದೀಗ ಆಶ್ವಾಸನೆ ನೀಡುತ್ತಿರುವುದು ದುರಂತದ ಸಂಗತಿಯಾಗಿದ್ದು, ಜನ ಬದಲಾವಣೆ ಬಯಸಿದ್ದಾರೆ. 1 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಗೆಲುವು ಖಚಿತ ಎಂದು ಮಾಜಿ ಉಪಮೇಯರ್, ಕೆಪಿಸಿಸಿ ಸಂಯೋಜಕ ಮೊಹಮ್ಮದ್ ಸನಾವುಲ್ಲಾ ವಿಶ್ವಾಸ ವ್ಯಕ್ತಪಡಿಸಿದರು. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 1350 ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಕೇಂದ್ರ ಸರ್ಕಾರ ಹೊರಡಿಸಿದ್ದು, ಅದನ್ನು ಇದುವರೆವಿಗೂ ಹಿಂಪಡೆಯಲಿಲ್ಲ. 2009 ರಿಂದ ಇಲ್ಲಿಯವರೆಗೂ ಸಂಸದ ಬಿ.ವೈ.ರಾಘವೇಂದ್ರ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು. ನಗರದ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿ ರೈಲ್ವೆ ಮೇಲ್ಸೇತುವೆ (ಎಲ್‌ಸಿ-34) ಕಾಮಗಾರಿ ಕಳೆದ 3 ವರ್ಷಗಳ ಹಿಂದೆಯೇ ಪ್ರಾರಂಭಗೊಂಡಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಅಲ್ಲದೆ ಈ ಕಾಮಗಾರಿ ಪ್ರಾರಂಭಗೊಂಡಂದಿನಿಂದಲೇ ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ಪರ್ಯಾಯ ರಸ್ತೆ ನಿರ್ಮಾಣ ಮಾಡ ಬೇಕಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರತಿನಿತ್ಯ ಇಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದ್ದು, ಇದನ್ನು ಗಮನಿಸಿದಾಗ ಸಂಸದರ ಬೇಜವಾಬ್ದಾರಿತನ ಸ್ಪಷ್ಟವಾಗುತ್ತದೆ ಎಂದು ದೂರಿದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಈ ಬಾರಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪನವರ ಪುತ್ರಿ ಗೀತಾ ಸ್ಪರ್ಧಿಸಿದ್ದು, ವಿಐಎಸ್ಎಲ್ ಕಾರ್ಖಾನೆ ಪುನರ್ ಪ್ರಾರಂಭಿಸುವುದು ಹಾಗೂ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಲೋಪ ದೋಷಗಳನ್ನು ಸರಿಪಡಿಸುವ ಸಲುವಾಗಿ ಇಲ್ಲಿನ ಜನರು ಬದಲಾವಣೆ ಬಯಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರು ಗೀತಾರವರಿಗೆ ಮತ ನೀಡಿ ಆಯ್ಕೆ ಮಾಡುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶಂಕರರಾವ್, ತರುಣ್‌ಕುಮಾರ್, ಸುಬ್ಬಾರಾಯ್ಡು, ಎ. ಕೃಷ್ಣ, ಅಖಿಲ್ ಅಹಮದ್, ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. .