ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದರೆ ಸಂಭ್ರಮಿಸುವ ಕಾಂಗ್ರೆಸ್‌: ಬೊಮ್ಮಾಯಿ

| Published : Jul 01 2024, 01:47 AM IST

ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದರೆ ಸಂಭ್ರಮಿಸುವ ಕಾಂಗ್ರೆಸ್‌: ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಪೆಟ್ರೋಲ್, ಡೀಸೆಲ್‌, ಬಟ್ಟೆ, ದಿನಸಿ ವಸ್ತುಗಳು ಸೇರಿದಂತೆ ಎಲ್ಲವನ್ನು ಹೆಚ್ಚಿಸಿ ಬಡವರ ಮೇಲೆ ಹೊರೆ ಹಾಕಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ರೈತರಿಗೆ ಪರಿಹಾರ ನೀಡಲಿಲ್ಲ. ಇದರಿಂದ ರೈತರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಗುರಿಯಾಗಬೇಕಾಯಿತು.

ಗದಗ: ಕೇಂದ್ರದಲ್ಲಿ ಕಾಂಗ್ರೆಸ್ ಕಳೆದ ಮೂರು ಚುನಾವಣೆಗಳಲ್ಲಿ ಗೆದ್ದಿರುವ ಸ್ಥಾನಗಳ ಸಂಖ್ಯೆಯನ್ನು ಒಟ್ಟಿಗೆ ಸೇರಿಸಿದರೂ ಬಿಜೆಪಿ ಈ ಬಾರಿ ಗೆದ್ದಷ್ಟು, ಅಂದರೆ 240 ಸ್ಥಾನ ಗಳಿಸಲು ಆಗಿಲ್ಲ. ಆದರೂ ನಾವು ಗೆದ್ದಿದ್ದೇವೆ ಎಂದು ಸಂಭ್ರಮ ಪಡುತ್ತಾರೆ. ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದರೆ ಸಂಭ್ರಮ ಪಡುವ ಮನಸ್ಥಿತಿ ಕಾಂಗ್ರೆಸ್‌ನಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

ಭಾನುವಾರ ಗದಗ ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಲೋಕಸಭೆ ಚುನಾವಣೆಯಲ್ಲಿ ಮತ ನೀಡಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂವಿಧಾನ ತಿದ್ದುಪಡಿಯನ್ನು ಅತಿ ಹೆಚ್ಚು ಬಾರಿ ಮಾಡಿದ್ದೇ ಕಾಂಗ್ರೆಸ್. ಆದರೆ, ಬಿಜೆಪಿ ಸಂವಿಧಾನ ತಿದ್ದುಪಡಿ ಮಾಡುತ್ತದೆ ಎಂದು ಹೇಳಿಕೊಂಡು ಓಡಾಡುತ್ತಿದೆ. 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯನ್ನು ಒಂದು ವರ್ಷ ಮುಂದೂಡುವುದು, ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಳ್ಳುವುದನ್ನು ಕಾಂಗ್ರೆಸ್ ಮಾಡಿದೆ. ಅಲ್ಪಸಂಖ್ಯಾತ ಮಹಿಳೆ ವಿಚ್ಛೇದನ ಆದರೆ ಜೀವನಾಂಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿತು. ಆದರೆ, ರಾಜೀವ್ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿ ಬಡ ಮುಸನ್ಮಾನ ಹೆಣ್ಣು ಮಕ್ಕಳ ಜೀವನಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದ್ದರು ಎಂದು ಹೇಳಿದರು.

ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಬಿಜೆಪಿ ಹೆಚ್ಚಿಸಿ ಆ ವರ್ಗದ ಜನರ ಹಿತ ಕಾಪಾಡಿದೆ. ಈಗ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಬೆಲೆ ಏರಿಕೆ ಮಾಡುವ ಮೂಲಕ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್‌, ಬಟ್ಟೆ, ದಿನಸಿ ವಸ್ತುಗಳು ಸೇರಿದಂತೆ ಎಲ್ಲವನ್ನು ಹೆಚ್ಚಿಸಿ ಬಡವರ ಮೇಲೆ ಹೊರೆ ಹಾಕಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ರೈತರಿಗೆ ಪರಿಹಾರ ನೀಡಲಿಲ್ಲ. ಇದರಿಂದ ರೈತರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಗುರಿಯಾಗಬೇಕಾಯಿತು. ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಸೂರು ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ನೀಡಿದ್ದರು ಎಂದು ಹೇಳಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಎಂ.ಎಸ್ ಕರಿಗೌಡ್ರ, ಕಾಂತಿಲಾಲ್ ಬನ್ಸಾಲಿ, ಡಾ. ಶೇಖರ್ ಸಜ್ಜನ್, ಅನಿಲಕುಮಾರ ಗಡ್ಡಿ, ಶಂಕರ ಇಂಡಿ, ನಿರ್ಮಲಾ ಕೊಳ್ಳಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಪ್ರಕಾಶ ಬಾಕಳೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಮುತ್ತಣ್ಣ ಮುಶಿಗೇರಿ, ನಾಗರಾಜ್ ತಳವಾರ, ಅನಿತಾ ವಿಜಯಕುಮಾರ ಗಡ್ಡಿˌ ವಿಜಯಲಕ್ಷ್ಮೀ ಶಶಿಧರ ದಿಂಡೂರ, ಇರ್ಶಾದ್ ಮಾನ್ವಿ, ವಿಜಯಲಕ್ಷ್ಮೀ ಮಾನ್ವಿ ಉಪಸ್ಥಿತರಿದ್ದರು.ನೀರಿನ ಸಮಸ್ಯೆ: 70 ವರ್ಷಗಳಾದರೂ ಇಲ್ಲಿ ಅಧಿಕಾರ ನಡೆಸಿದವರಿಗೆ ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಕೊಡಲು ಇಲ್ಲಿಯವರೆಗೂ ಆಗಿಲ್ಲ. ಅವಳಿ ನಗರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಚುನಾವಣೆ ಸಮಯದಲ್ಲಿ ನಿಮ್ಮ ನಿಮ್ಮ ವಾರ್ಡಿಗೆ ಪ್ರಚಾರಕ್ಕೆ ಬಂದಾಗ ಆತ್ಮೀಯವಾಗಿ ಸ್ವಾಗತಿಸಿದ್ದೀರಿ. ಮತದಾನದ ವೇಳೆಯಲ್ಲಿ ನನಗೆ ಹೆಚ್ಚಿನ ಲೀಡ್ ಕೊಟ್ಟು ಗೆಲುವು ಸಾಧಿಸುವಲ್ಲಿ ಸಹಾಯ ಮಾಡಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ಗದಗ-ಬೆಟಗೇರಿಗೆ ಕೈಗಾರಿಕೆ ತಂದು ಇಲ್ಲಿನ ಯುವಕರಿಗೆ ಉದ್ಯೋಗ ನೀಡಿ, ಕೈಗಾರಿಕೆ ನಗರವನ್ನಾಗಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.