ಕುಂದಾನಗರಿಯಲ್ಲಿ ಕಾಂಗ್ರೆಸ್‌ ಶತಮಾನೋತ್ಸವದ ಕಲರವ

| Published : Dec 26 2024, 01:03 AM IST

ಕುಂದಾನಗರಿಯಲ್ಲಿ ಕಾಂಗ್ರೆಸ್‌ ಶತಮಾನೋತ್ಸವದ ಕಲರವ
Share this Article
  • FB
  • TW
  • Linkdin
  • Email

ಸಾರಾಂಶ

ಮೋಹನದಾಸ ಕರಮಚಂದ ಗಾಂಧಿ. ಅರ್ಥಾತ್‌ ಮಹಾತ್ಮ ಗಾಂಧಿ. 1924, ಡಿಸೆಂಬರ್‌ ಕಾಂಗ್ರೆಸ್‌ನ ಸಮಾವೇಶದ ಮೂಲಕ ಕುಂದಾನಗರಿ ಬೆಳಗಾವಿಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು. ಈಗ ಅದರ ಶತಮಾನೋತ್ಸವದ ಸಂಭ್ರಮ. ಈ ನಿಟ್ಟಿನಲ್ಲಿ ಬೆಳಗಾವಿ ನಗರಕ್ಕೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ದೇಶದ ನಾನಾ ಭಾಗಗಳಿಂದ ಘಟಾನುಘಟಿಗಳು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ಈಗ ವಿದ್ಯುತ್‌ ಮತ್ತು ನಾಯಕರ ಆಗಮನದ ಶುಭಾಶಯಗಳನ್ನು ಕೋರಿದ ಕಟೌಟ್‌ಗಳೇ ತುಂಬಿಕೊಂಡಿವೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಳಗಾವಿಮೋಹನದಾಸ ಕರಮಚಂದ ಗಾಂಧಿ. ಅರ್ಥಾತ್‌ ಮಹಾತ್ಮ ಗಾಂಧಿ. 1924, ಡಿಸೆಂಬರ್‌ ಕಾಂಗ್ರೆಸ್‌ನ ಸಮಾವೇಶದ ಮೂಲಕ ಕುಂದಾನಗರಿ ಬೆಳಗಾವಿಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು. ಈಗ ಅದರ ಶತಮಾನೋತ್ಸವದ ಸಂಭ್ರಮ. ಈ ನಿಟ್ಟಿನಲ್ಲಿ ಬೆಳಗಾವಿ ನಗರಕ್ಕೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ದೇಶದ ನಾನಾ ಭಾಗಗಳಿಂದ ಘಟಾನುಘಟಿಗಳು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ಈಗ ವಿದ್ಯುತ್‌ ಮತ್ತು ನಾಯಕರ ಆಗಮನದ ಶುಭಾಶಯಗಳನ್ನು ಕೋರಿದ ಕಟೌಟ್‌ಗಳೇ ತುಂಬಿಕೊಂಡಿವೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಕಾಂಗ್ರೆಸ್‌ನ ಈ ಸಮಾವೇಶ ಸ್ವಾತಂತ್ರ್ಯ ಚಳವಳಿಗೂ ಹೊಸ ವೇದಿಕೆಯನ್ನೂ ನಿರ್ಮಿಸಿಕೊಟ್ಟಿತು. ಮಾತ್ರವಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತಷ್ಟು ಬೇರೂರಲು ಕಾರಣವಾಯಿತು. ಸರೋಜಿನಿ ನಾಯ್ಡು ಅವರನ್ನೇ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಮನವಿ ಸಲ್ಲಿಸಲು ವೇದಿಕೆ ಸಜ್ಜಾಗಿತ್ತು. ಈ ಸಂದರ್ಭದಲ್ಲಿಯೇ ಜೈಲಿನಿಂದ ಮಹಾತ್ಮ ಗಾಂಧೀಜಿಯವರು ಬಿಡುಗಡೆಯಾಗುತ್ತಾರೆ. ಅವರನ್ನೇ ಬೆಳಗಾವಿಗೆ ಕರೆತಂದು ಅಧ್ಯಕ್ಷರನ್ನಾಗಿ ಮಾಡಲು ಗಂಗಾಧರರಾವ್‌ ದೇಶಪಾಂಡೆ ಅವರ ಶ್ರಮ ಅವಿರತ ಎನ್ನುವುದರಲ್ಲಿ ಎರಡು ಮಾತಿಲ್ಲ. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ದೇಶದ ಬೇರೆ ಬೇರೆ ರಾಜ್ಯಗಳಿಂದ 6234 ಪ್ರತಿನಿಧಿಗಳು ಬರುವ ನಿರೀಕ್ಷೆ ಇತ್ತು. ಆದರೆ, ಒಟ್ಟು ಹಾಜರಾದ ಪ್ರತಿನಿಧಿಗಳು 1,844. ಬೆಳಗಾವಿಯ ಈಗಿನ ಟಿಳಕವಾಡಿಯ 1ನೇ ಮತ್ತು 2ನೇ ಗೇಟಿನ ಸುಮಾರು 85 ಎಕರೆ ವಿಸ್ತಾರವಾದ ಮೈದಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮರಣೆಗಾಗಿ ವಿಜಯನಗರ ಎಂದು ಹೆಸರಿಟ್ಟು ಸ್ವಾಗತ ಮಂಟಪ ರಚಿಸಲಾಗಿತ್ತು. ನಂತರ ಅಧಿವೇಶನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ₹4370, ಮತ್ತು 3 ಆಣೆ ಕರ್ಚಿನಲ್ಲಿ ಬಾವಿ ನಿರ್ಮಿಸಲಾಯಿತು. ಇಂತಹ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ.

ಕಾಂಗ್ರೆಸ್‌ ಪಕ್ಷವೇ ಈಗ ಶತಮಾನೋತ್ಸವದ ಜವಾಬ್ದಾರಿಯನ್ನು ಹೊತ್ತಿದೆ. ಈ ನಿಟ್ಟಿನಲ್ಲಿ ಕುಂದಾನಗರಿಯಲ್ಲಿ ಈಗ ವಿದ್ಯುತ್‌ ದೀಪಾಲಂಕಾರ ಮನಸೂರೆಗೊಂಡಿದೆ. ಮಹಾತ್ಮ ಗಾಂಧೀಜಿ, ಚನ್ನಮ್ಮಾಜಿ, ಬುದ್ಧ, ಡಾ.ಬಿ.ಆರ್‌.ಅಂಬೇಡ್ಕರ್‌, ಮೈಸೂರು ಅರಮನೆ, ಲಕ್ಷ್ಮಿದೇವಿ, ಸಂಸತ್ತಿನ ಮುಂದಿರುವ ಸ್ವಾತಂತ್ರ್ಯ ನಾಯಕರ ಬಿಂಬಿಸುವ ಪುತ್ಥಳಿಯ ದೀಪಾಲಂಕಾರ, ಸಂಗೊಳ್ಳಿ ರಾಯಣ್ಣ, ಕೆಂಪು ಕೋಟೆ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ವಿದ್ಯುತ್‌ ದೀಪಾಲಂಕಾರವನ್ನು ಮಾಡಲಾಗಿದೆ. ಇದು ಜನರ ಮನಸೂರೆಗೊಂಡಿದೆ.

ರಾರಾಜಿಸುತ್ತಿವೆ ನಾಯಕರ ಕಟೌಟ್‌ಗಳು:

ಬೆಳಗಾವಿ ನಗರ ಪ್ರವೇಶಿಸುವ ಗಾಂಧಿನಗರ, ಕಾಕತಿ, ಲಿಂಗರಾಜ ಕಾಲೇಜು ರಸ್ತೆ, ಶ್ರೀನಗರ, ರಾಮತೀರ್ಥನಗರ, ಕಾಲೇಜು ರಸ್ತೆ, ಖಾನಾಪುರ ರಸ್ತೆ, ಕಾಂಗ್ರೆಸ್‌ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರ ಫೋಟೊಗಳಿರುವ ಕಟೌಟ್‌ಗಳನ್ನು ಕಟ್ಟಲಾಗಿದೆ. ಮಾತ್ರವಲ್ಲ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಸೇರಿದಂತೆ ಪ್ರಮುಖ ನಾಯಕರ ಕಟೌಟ್‌ಗಳನ್ನು ಹಾಕಿ ಕಾಂಗ್ರೆಸ್‌ ಶತಮಾನೋತ್ಸವಕ್ಕೆ ಸ್ವಾಗತ ಕೋರುವ ಶುಭಾಶಯಗಳನ್ನು ಹಾಕಲಾಗಿದೆ.

ಇದರ ಜತೆಗೆ ನಗರದೆಲ್ಲೆಡೆ ಕಾಂಗ್ರೆಸ್‌ನ ಬಾವುಟಗಳೇ ಕಾಣಸಿಗುತ್ತಿವೆ. ಬ್ಯಾನರ್‌ಗಳು ಕೂಡ ಸಿಗುತ್ತಿವೆ. ಸ್ಥಳೀಯ ನಾಯಕರು, ಸಚಿವರು, ಶಾಸಕರು ಕೂಡ ಪ್ರಮುಖ ನಾಯಕರ ಆಗಮನಕ್ಕೆ ಶುಭ ಕೋರಿದ್ದಾರೆ.

ಊಟದ ವ್ಯವಸ್ಥೆಗೆ 150 ಬಾಣಸಿಗರು:

ಬೆಳಗಾವಿಯ ಕಾರ್ಯಕ್ರಮಕ್ಕೆ ಅಂದಾಜು 1ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ 150ಕ್ಕೂ ಅಧಿಕ ಬಾಣಸಿಗರು ಅಡುಗೆ ಸಿದ್ಧಪಡಿಸಲಿದ್ದಾರೆ. ಜನರಿಗೆ 5 ಪ್ರಮುಖ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. 200ಕ್ಕೂ ಅಧಿಕ ಸ್ವಯಂ ಸೇವಕರು ಆಹಾರ ವಿತರಣೆಗೆ ಸಜ್ಜಾಗಿದೆ. ಧಾರವಾಡ, ಚನ್ನಮ್ಮನ ಕಿತ್ತೂರು ಕಡೆಯಿಂದ ಬರುವವರಿಗಾಗಿ ಸುವರ್ಣ ವಿಧಾನಸೌಧದ ಬಳಿ, ಹುಕ್ಕೇರಿ, ಸಂಕೇಶ್ವರದಿಂದ ಬರುವವರಿಗೆ ಹೊನಗಾ ಗ್ರಾಮ, ಗೋಕಾಕ, ಘಟಪ್ರಭಾ, ರಾಯಬಾಗದಿಂದ ಬರುವವರಿಗೆ ಖನಗಾವಿ, ಗೋಕಾಕ ರಸ್ತೆ, ಬಾಗಲಕೋಟೆ, ವಿಜಯಪುರದಿಂದ ಬರುವವರಿಗೆ ಪಂತ ಬಾಳೇಕುಂದ್ರಿಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ಮತ್ತು ಖಾನಾಪುರದಿಂದ ಬರುವವರಿಗಾಗಿ ರಕ್ಕಸಕೊಪ್ಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.