ಮತ ಕಳ್ಳತನ ಆರೋಪಿಸಿ ಕಾಂಗ್ರೆಸ್‌ನಿಂದ ಸಹಿ ಸಂಗ್ರಹ

| Published : Oct 15 2025, 02:07 AM IST

ಸಾರಾಂಶ

ದೇಶದಲ್ಲಿ ಮತ ಕಳ್ಳತನವಾಗುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಹಿರೇಕೆರೂರು: ದೇಶದಲ್ಲಿ ಮತ ಕಳ್ಳತನವಾಗುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಯು.ಬಿ. ಬಣಕಾರ, ಪ್ರಜಾಪ್ರಭುತ್ವ ಹಾಗೂ ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಯತ್ನಿಸುತ್ತಿದೆ. ಎಐಸಿಸಿ ಹಾಗೂ ಕೆಪಿಸಿಸಿ ಸೂಚನೆ ಮೇರೆಗೆ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಮತಗಳ್ಳತನದ ವಿರುದ್ಧ ಸಹಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಮತಗಳ್ಳತನ ಮಾಡುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಮತದಾರರ ಪಟ್ಟಿಯಲ್ಲಿ ಸುಳ್ಳು ಹೆಸರು ಇರುವುದನ್ನು ಕಾಂಗ್ರೆಸ್ ಸಾಕ್ಷ್ಯ ಸಮೇತ ಜನರ ಮುಂದಿಟ್ಟಿದೆ. ಒಬ್ಬ ಮತದಾರ ಹಲವು ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡಿರುವುದು ಪತ್ತೆಯಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಮತದಾನ ಬಹಳ ಪಾವಿತ್ರ‍್ಯವಾದದ್ದು ಇದನ್ನು ಜನರು ಅರಿತುಕೊಳ್ಳಬೇಕು, ಮತಗಳ್ಳತನದ ಹೊಸ ಪಿಡುಗು ಇದು ನಮ್ಮ ಮಧ್ಯ ಉದ್ಭವವಾಗಿರುವುದು ಆತಂಕಕಾರಿ ಸಂಗತಿ. ಚುನಾವಣಾ ಆಯೋಗ ಹಾಗೂ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ವರಿಷ್ಠರ ಅಣತಿ ಮೇರೆಗೆ ನ್ಯಾಯಯುತ ಕಾರ್ಯವನ್ನು ಒದಗಿಸಿಕೊಡಬೇಕು ಎಂದು ಸಹಿ ಸಂಗ್ರಹ ಅಭಿಯಾನ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹಿ ಸಂಗ್ರಹ ಅಭಿಯಾನಕ್ಕೆ ಸಹಕರಿಸಿ ನಮ್ಮ ಹಕ್ಕನ್ನು ಉಳಿಸಿಕೊಳ್ಳುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.ಸಹಿ ಸಂಗ್ರಹ ಅಭಿಯಾನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಪಪಂ ಅಧ್ಯಕ್ಷೆ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡಿ ಮುಖಂಡರಾದ ಡಾ. ನಿಂಗಪ್ಪ ಚಳಗೇರಿ, ಸನಾವುಲ್ಲಾ ಮಕನದಾರ, ರಜೀಯಾ ಅಸದಿ, ಸಿದ್ದನಗೌಡ ನರೇಗೌಡ್ರ, ಸಿದ್ದು ತಂಬಾಕದ ಸೇರಿದಂತೆ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.