ಹುಬ್ಬಳ್ಳಿ:

ಕ್ಷೇತ್ರ ಪುನರ್‌ವಿಂಗಡಣೆ ವಿಷಯವನ್ನಿಟ್ಟುಕೊಂಡು ದೇಶವನ್ನು ಉತ್ತರ, ದಕ್ಷಿಣ ಎಂದು ಇಬ್ಭಾಗ ಮಾಡಲು ಕಾಂಗ್ರೆಸ್‌ ಷಡ್ಯಂತ್ರ ಮಾಡುತ್ತಿದೆ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಕ್ಷೇತ್ರ ಪುನರ್‌ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗಲ್ಲ ಎಂದು ಅವರು ಪುನರುಚ್ಛಿಸಿದರು.ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಬಿಲ್‌ಗೆ ಸೋಲಾಗಿದ್ದಕ್ಕೆ ಕಾಂಗ್ರೆಸ್‌ ವಿರುದ್ಧ ಇಲ್ಲಿನ ನೆಹರು ಮೈದಾನದಲ್ಲಿ ಶುಕ್ರವಾರ ಬಿಜೆಪಿಯಿಂದ ನಡೆದ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದಲೇ 2011ರ ಜನಗಣತಿ ಪ್ರಕಾರ ಕ್ಷೇತ್ರ ಪುನರ್‌ ವಿಂಗಡಣೆ ಮಾಡಲು ಬಿಜೆಪಿ ಹೊರಟಿತ್ತು. ಲೋಕಸಭಾ ಕ್ಷೇತ್ರಗಳ ಸಂಖ್ಯೆ 850ಕ್ಕೇರಿಸಲು ನಿರ್ಧರಿಸಲಾಗಿತ್ತು. ಆದರೆ, ಹೊಸ ಜನಗಣತಿ ಆಧಾರದ ಮೇಲೆ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂದು ಕಾಂಗ್ರೆಸ್‌ ಒತ್ತಾಯಿಸುತ್ತಿದೆ. ಇದು ನಾಟಕ, ಸುಳ್ಳು ಹೇಳುವ ಕೆಲಸ ಮಾಡುತ್ತಿದೆ. ಈಗಿನ ಕ್ಷೇತ್ರಗಳಿಗೆ ಮೀಸಲಾತಿ ನೀಡಿ ಎಂದು ಹೇಳುತ್ತಿದೆ. ಹಾಗೆ ನೀಡಿದರೆ ಪುರುಷರಿಗೆ ಅನ್ಯಾಯವಾಗುತ್ತದೆ ಎಂದ ಅವರು, ಪುರುಷ-ಮಹಿಳೆಯರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ 2011ರ ಜನಗಣತಿ ಮೂಲಕ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಸರ್ಕಾರ ಹೊರಟಿತ್ತು ಎಂದು ಸ್ಪಷ್ಟಪಡಿಸಿದರು.ಈಗಲೇ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ ಪ್ರತಿ ರಾಜ್ಯಕ್ಕೂ ಈಗಿರುವ ಸ್ಥಾನಕ್ಕೆ ಶೇ. 50ರಷ್ಟು ಸೀಟು ಹೆಚ್ಚುವರಿಯಾಗಿ ಸಿಗುತ್ತಿದ್ದವು. ಹೊಸ ಜನಗಣತಿ ಪ್ರಕಾರ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ, ಜನಸಂಖ್ಯೆ ಆಧಾರದ ಮೇಲೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಹೆಚ್ಚು ಎಂದ ಅವರು, ಆಗ ಇದನ್ನೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ದಕ್ಷಿಣ ಹಾಗೂ ಉತ್ತರ ಭಾರತವೆಂದು ದೇಶ ಒಡೆಯುವ ಷಡ್ಯಂತ್ರ ಮಾಡುತ್ತಾರೆ. ಕಾಂಗ್ರೆಸ್ಸಿನದು ಬರೀ ಒಡೆದಾಳುವ ನೀತಿ ಎಂದು ಕಿಡಿಕಾರಿದರು.

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರು ನಿರ್ಣಯ ತೆಗೆದುಕೊಳ್ಳುವ ಸ್ಥಾನದಲ್ಲಿ ಇರಬೇಕು ಎನ್ನುವ ಸದುದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರದು. ಅದಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ಮುಂದಾಗಿದ್ದರು. ಜಾತಿ, ಧರ್ಮದ ನಡುವೆ ಒಡೆದಾಳುವ ನೀತಿಯ ಮೂಲಕ ರಾಜಕಾರಣ ಮಾಡುತ್ತಾ ಬಂದ ಕಾಂಗ್ರೆಸ್‌, ಇದೀಗ ಮಹಿಳಾ ಮೀಸಲಾತಿ, ಕ್ಷೇತ್ರಗಳ ಪುನರ್ ವಿಂಗಡಣೆ ನೆಪದಲ್ಲಿ ದೇಶ ಒಡೆಯುವ ಜತೆಗೆ ಹೆಣ್ಣು-ಗಂಡೆಂದು ಒಡೆಯುವ ಯತ್ನಕ್ಕೆ ಕೈಹಾಕಿದೆ ಎಂದು ಗಂಭೀರ ಆರೋಪ ಮಾಡಿದರು.ಮಹಿಳೆಯರಿಗೆ ಧ್ವನಿಯಿದೆ. ಅದರೆ ಅದಕ್ಕೆ ಶಕ್ತಿ ತುಂಬಬೇಕಿದೆ. ಆ ಶಕ್ತಿ ತುಂಬುವ ಕೆಲಸ ಬಿಜೆಪಿ ಮಾಡಲು ಹೊರಟಿತ್ತು. ಅದನ್ನು ವಿಫಲಗೊಳಿಸಿರುವ ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಗುಡುಗಿದರು.


ಮುಂದೆ ಮಹಿಳಾ ಮೀಸಲಾತಿ ತರುವುದು ಗ್ಯಾರಂಟಿ ಎಂದ ಅವರು, ಪ್ರತಿಯೊಬ್ಬ ಮಹಿಳೆಯೂ ಈ ಬಗ್ಗೆ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಬೇಕು ಎಂದರು.